ಭಾರತೀಯ ತಟ ರಕ್ಷಣಾ ಪಡೆಯ ಪ್ರಧಾನ ನಿರ್ದೇಶಕರಾಗಿ ಕೃಷ್ಣಸ್ವಾಮಿ ನಟರಾಜನ್ ನಿಯೋಜನೆ

Update: 2019-06-25 14:36 GMT

ಹೊಸದಿಲ್ಲಿ, ಜೂ. 25: ಭಾರತೀಯ ತಟ ರಕ್ಷಣಾ ಪಡೆಯ ಪ್ರಧಾನ ನಿರ್ದೇಶಕರಾಗಿ ಕೃಷ್ಣಸ್ವಾಮಿ ನಟರಾಜನ್ ಮಂಗಳವಾರ ನಿಯೋಜಿತರಾಗಿದ್ದಾರೆ. ತಟರಕ್ಷಣಾ ಪಡೆಯ ಮುಖ್ಯಸ್ಥರಾಗಿದ್ದ ಪ್ರಥಮ ಕೇಡರ್‌ನ ಅಧಿಕಾರಿ ರಾಜೇಂದ್ರ ಸಿಂಗ್ ಅವರ ಉತ್ತರಾಧಿಕಾರಿಯಾಗಿ ನಟರಾಜನ್ ನಿಯೋಜನೆಯಾಗಿದ್ದಾರೆ.

ಭಾರತೀಯ ತಟ ರಕ್ಷಣಾ ಪಡೆಯ ನೇತೃತ್ವ ವಹಿಸುತ್ತಿರುವ ಪಡೆಯ ಎರಡನೇ ಅಧಿಕಾರಿ ನಟರಾಜನ್. ಅವರು ಜೂನ್ 30ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಕ್ಷಣೆ ಹಾಗೂ ವ್ಯೆಹಾತ್ಮಕ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಟರಾಜನ್ 1984 ಜನವರಿ 18ರಂದು ಭಾರತೀಯ ತಟ ರಕ್ಷಣಾ ಪಡೆಗೆ ಸೇರಿದ್ದರು. ತೀರ ಹಾಗೂ ಹಡಗಿನಲ್ಲಿ ವಿವಿಧ ಪ್ರಮುಖ ಕಮಾಂಡ್ ಹಾಗೂ ಸಿಬ್ಬಂದಿ ನೇಮಕಾತಿಯಲ್ಲಿ ನಟರಾಜನ್ ಪ್ರಮುಖ ಪಾತ್ರ ವಹಿಸಿದ್ದರು. ಅವರು 2009 ಆಗಸ್ಟ್‌ನಲ್ಲಿ ಫ್ಲಾಗ್ ಆಫೀಸರ್ ಶ್ರೇಣಿಗೆ ಬಡ್ತಿ ಪಡೆದ ಬಳಿಕ 2014ರ ವರೆಗೆ ಭಾರತೀಯ ತಟ ರಕ್ಷಣಾ ಪಡೆಯ ಕೇಂದ್ರ ಕಚೇರಿಯ ನೀತಿ ಹಾಗೂ ಯೋಜನೆಯ ಸಿಬ್ಬಂದಿ ವಿಭಾಗದ ಉಪ ಪ್ರಧಾನ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.

 ಫ್ಲಾಗ್ ಆಫೀಸರ್ ನಟರಾಜನ್ 2015 ಮೇ 14ರಿಂದ ತಟ ರಕ್ಷಣಾ ವಲಯ (ಅಂಡಮಾನ್ ಹಾಗೂ ನಿಕೋಬಾರ್)ದ ಕಮಾಂಡರ್ ಆಗಿದ್ದರು. ಅದೇ ವರ್ಷ ಜುಲೈ 27ರಂದು ಪಶ್ಚಿಮ ವಲಯದ ನೇತೃತ್ವವನ್ನು ಕೂಡ ಅವರು ವಹಿಸಿದ್ದರು. 2016 ಆಗಸ್ಟ್ 12ರಂದು ಅವರು ಫ್ಲಾಗ್ ಆಫೀಸರ್ ಹುದ್ದೆಯಿಂದ ಹೆಚ್ಚುವರಿ ಪ್ರಧಾನ ನಿದೇಶಕರ ಹುದ್ದೆಗೆ ಬಡ್ತಿ ಹೊಂದಿದ್ದರು. ಪ್ರಸ್ತುತ ತಟ ರಕ್ಷಣಾ ಕಮಾಂಡರ್ (ಪಶ್ಚಿಮ ಸಮುದ್ರ ತೀರ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News