‘ಪಶ್ಚಿಮ ಬಾಂಗ್ಲಾದೇಶ’ ಸೃಷ್ಟಿಸಲು ಮಮತಾ ಸರಕಾರದ ಯತ್ನ: ಬಿಜೆಪಿ

Update: 2019-06-25 15:25 GMT

ಹೊಸದಿಲ್ಲಿ,ಜೂ.25: ಪಶ್ಚಿಮ ಬಂಗಾಳದಲ್ಲಿ ನೆಲೆಸಲು ಬಾಂಗ್ಲಾದೇಶಿ ವಲಸಿಗರಿಗೆ ಅವಕಾಶ ನೀಡುವ ಮೂಲಕ ಮಮತಾ ಬ್ಯಾನರ್ಜಿ ಸರಕಾರವು ‘ಪಶ್ಚಿಮ ಬಾಂಗ್ಲಾದೇಶ ’ವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.

ಆದರೆ,ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಮಸೂದೆ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ ಎಂದು ತೃಣಮೂಲ ಪಕ್ಷವು ಹೇಳಿದೆ.

 ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನಿರ್ಣಯದ ಮೇಲೆ ಮಾತನಾಡಿದ ಪ.ಬಂಗಾಳದ ಬಿಜೆಪಿ ಸದಸ್ಯ ದಿಲೀಪ ಘೋಷ್ ಅವರು,ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಹಾಗೂ ಪ್ರಜಾಪ್ರಭುತ್ವವು ಬಿಕ್ಕಟ್ಟಿನಲ್ಲಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿಯಾಗಲು ಕಾತರಿಸುತ್ತಿದ್ದಾರೆ. ಅವರು ಬಂಗಾಳ ಮತ್ತು ಬಾಂಗ್ಲಾದೇಶವನ್ನು ಒಂದುಗೂಡಿಸಲು ಹಾಗೂ ಪಶ್ಚಿಮ ಬಾಂಗ್ಲಾದೇಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತದಿಂದ ಬಂಗಾಳವನ್ನು ಪ್ರತ್ಯೇಕಿಸಲು ಸಂಚು ನಡೆಯುತ್ತಿದೆ ಎಂದು ಹೇಳಿದರು.

ನ್ಯಾಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಬೋಧಿಸಿದ್ದು ಶ್ರೀರಾಮ ಮತ್ತು ಅವು ರಾಜ್ಯದಲ್ಲಿ ಅಗತ್ಯವಾಗಿವೆ. ಹೀಗಾಗಿ ಬಿಜೆಪಿಯ ‘ಜೈ ಶ್ರೀರಾಮ ’ಘೋಷಣೆಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಮೊದಲ ಬಾರಿಗೆ ಸಂಸದರಾಗಿರುವ ಘೋಷ್ ಹೇಳಿದರು.

‘ಜೈ ಬಾಂಗ್ಲಾ’ ಬಾಂಗ್ಲಾದೇಶದಿಂದ ಆಮದಾಗಿರುವ ಘೋಷಣೆಯಾಗಿದ್ದರೆ,‘ಜೈ ಶ್ರೀರಾಮ’ ನಮ್ಮದೇ ಘೋಷಣೆಯಾಗಿದೆ ಎಂದರು.

ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಂಸಾಚಾರಗಳು ನಡೆದಿದ್ದ ಏಕೈಕ ರಾಜ್ಯ ಪಶ್ಚಿಮ ಬಂಗಾಳವಾಗಿದೆ. ರಾಜ್ಯದಲ್ಲಿ ಇರಬೇಕೆಂದರೆ ಬಂಗಾಳಿಯನ್ನು ಕಲಿಯಬೇಕು ಎಂದು ತೃಣಮೂಲ ಹೇಳುತ್ತಿದೆ. ಇದು ನಾವೀಗ ನೋಡುತ್ತಿರುವ ‘ಸೋನಾರ್ ಬಾಂಗ್ಲಾ’ ಎಂದರು.

ಸದನದಲ್ಲಿ ಮಾತನಾಡಿದ ತೃಣಮೂಲ ಸದಸ್ಯೆ ಮಹುವಾ ಮೊಯಿತ್ರಾ ಅವರು,ಬಿಜೆಪಿಯು 2014ರಿಂದಲೂ ದೇಶದಲ್ಲಿ ಭೀತಿಯನ್ನು ಹರಡುತ್ತಿದೆ ಮತ್ತು ಅಯೋಧ್ಯೆಯ ವಿವಾದಿತ ತಾಣವನ್ನು ರಾಜಕೀಯಗೊಳಿಸುತ್ತಿದೆ. ಅದು ಧರ್ಮವನ್ನು ಪೌರತ್ವದೊಂದಿಗೆ ಬೆರೆಸುತ್ತಿದೆ. ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆ ಮೂಲಕ ಏಕೈಕ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಸಿದ್ಧಾಂತಗಳನ್ನು ಬೋಧಿಸಲು ಪಠ್ಯಪುಸ್ತಕಗಳನ್ನೂ ಬದಲಿಸಲಾಗುತ್ತಿದೆ ಎಂದರು.

ಬಿಜೆಪಿಯಡಿ ದೇಶದಲ್ಲಿ ಚುನಾವಣಾ ವ್ಯವಸ್ಥೆಯು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಮತ್ತು ಅಪಾಯಕಾರಿ ಫ್ಯಾಸಿಸ್ಟ್‌ವಾದವು ತಲೆಯೆತ್ತುತ್ತಿದೆ ಎಂದೂ ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News