ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಶಾಸಕರ ನಗದು, ಸೊತ್ತು ದೋಚಿದರು!

Update: 2019-06-25 14:54 GMT

ಮುಂಬೈ,ಜೂ.25: ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಂಬೈಗೆ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರದ ಇಬ್ಬರು ಶಾಸಕರ ನಗದು ಹಣ ಮತ್ತು ಸೊತ್ತುಗಳನ್ನು ಅಪರಿಚಿತ ವ್ಯಕ್ತಿಗಳು ಸೋಮವಾರ ದೋಚಿದ್ದಾರೆ.

ಹಾಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಚಿಕ್ಲಿಯ ಕಾಂಗ್ರೆಸ್ ಶಾಸಕ ರಾಹುಲ್ ಬೊಂದ್ರೆ ಅವರು ಮಲ್ಕಾಪುರದಿಂದ ವಿದರ್ಭ ಎಕ್ಸ್‌ಪ್ರೆಸ್‌ನಲ್ಲಿ ಮತ್ತು ಮೆಹ್ಕಾರ್‌ನ ಶಿವಸೇನಾ ಶಾಸಕ ಸಂಜಯ ರೈಮುಲ್ಕರ್ ಅವರು ಜಾಲ್ನಾದಿಂದ ದೇವಗಿರಿ ಎಕ್ಸ್‌ಪ್ರೆಸ್‌ನಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆಗಳು ನಡೆದಿವೆ.

 ರೈಲು ಕೆಲ ಕಾಲ ಕಲ್ಯಾಣ ನಿಲ್ದಾಣದಲ್ಲಿ ನಿಂತಿದ್ದಾಗ ಶಾಸಕರಿಗೆ ಮೀಸಲಾದ ಹವಾ ನಿಯಂತ್ರಿತ ಬೋಗಿಯನ್ನು ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿ ತನ್ನ ಪತ್ನಿಯ ಪರ್ಸ್ ಮತ್ತು ದಾಖಲೆಗಳಿದ್ದ ಕಡತವೊಂದನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಪರ್ಸ್‌ನಲ್ಲಿ 51,000 ರೂ.ನಗದು ಮತ್ತು ಒಂದು ಎಟಿಎಂ ಕಾರ್ಡ್ ಇದ್ದವು ಎಂದು ಬೊಂದ್ರೆ ಕಲ್ಯಾಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಲ್ಯಾಣ ಮತ್ತು ಥಾಣೆ ನಿಲ್ದಾಣಗಳ ಮಧ್ಯೆ ತನಗೆ ಎಚ್ಚರವಾಗಿದ್ದು,ತನ್ನ ಮೊಬೈಲ್ ಫೋನ್,ನಗದು 10,000 ರೂ. ಮತ್ತು ಗುರುತಿನ ಚೀಟಿ ನಾಪತ್ತೆಯಾಗಿದ್ದವು ಎಂದು ರೈಮುಲ್ಕರ್ ಅವರು ಸಿಎಸ್‌ಎಂಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ.

ತನ್ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬೊಂದ್ರೆ ಸರಕಾರವನ್ನು ತರಾಟೆಗೆತ್ತಿಕೊಂಡರು. ಬಿಜೆಪಿ ಆಡಳಿತದಲ್ಲಿ ಕಳ್ಳರಿಗೆ ‘ಅಚ್ಚೇ ದಿನ್’ಗಳು ಬಂದಿವೆ ಎಂದ ಅವರು,ಶಾಸಕರಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News