ಈ ವರ್ಷ 2 ಲಕ್ಷ ಭಾರತೀಯರಿಂದ ಹಜ್ ಯಾತ್ರೆ, 48 ಶೇ. ಮಹಿಳೆಯರು: ನಖ್ವಿ

Update: 2019-06-25 15:09 GMT

ಹೊಸದಿಲ್ಲಿ, ಜೂ.25: ಈ ವರ್ಷ ದಾಖಲೆಯ ಎರಡು ಲಕ್ಷ ಭಾರತೀಯ ಮುಸ್ಲಿಮರು ಹಜ್‌ ನಿರ್ವಹಿಸಲು ಪ್ರಯಾಣ ಬೆಳೆಸಲಿದ್ದಾರೆ, ಈ ಪೈಕಿ ಶೇ.48 ಮಹಿಳೆಯರು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.

 ಈ ವರ್ಷ 2,340ಕ್ಕೂ ಅಧಿಕ ಮಹಿಳೆಯರು ಪುರುಷರ ಜೊತೆಗಾರರು ಇಲ್ಲದೆ ಹಜ್‌ಗೆ ತೆರಳಲಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 1,180 ಆಗಿತ್ತು. ಈ ಮಹಿಳೆಯರನ್ನು ಯಾವುದೇ ಲಾಟರಿ ವ್ಯವಸ್ಥೆಯಿಲ್ಲದೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 ಹಜ್ ಕೋಟ ಹೆಚ್ಚಾಗಿರುವ ಕಾರಣ ನಿರೀಕ್ಷಣಾ ಪಟ್ಟಿಯಲ್ಲಿದ್ದ ಎಲ್ಲರಿಗೂ ಈ ವರ್ಷ ಅವಕಾಶ ನೀಡಿರುವುದರಿಂದ ಇದೇ ಮೊದಲ ಬಾರಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಎಲ್ಲ ಅರ್ಜಿದಾರರು ಹಜ್‌ಗೆ ತೆರಳಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ. ಸ್ವಾತಂತ್ರ ನಂತರ ಇದೇ ಮೊದಲ ಬಾರಿ ಎರಡು ಲಕ್ಷ ಭಾರತೀಯ ಮುಸ್ಲಿಮರು 21 ವಿವಿಧ ವಿಮಾನ ನಿಲ್ದಾಣಗಳಿಂದ 500 ವಿಮಾನಗಳಲ್ಲಿ ಹಜ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.

 ಹಜ್‌ಗೆ ತೆರಳುವ ವಿಮಾನಗಳು ದಿಲ್ಲಿ, ಗಯಾ,ಗುವಾಹತಿ ಮತ್ತು ಶ್ರೀನಗರದಿಂದ ಜುಲೈ 4ಕ್ಕೆ, ಬೆಂಗಳೂರು ಮತ್ತು ಕಲ್ಲಿಕೋಟೆಯಿಂದ ಜುಲೈ 7ಕ್ಕೆ, ಕೊಚ್ಚಿನ್‌ನಿಂದ ಜುಲೈ 14ಕ್ಕೆ, ಮಂಗಳೂರಿನಿಂದ ಜುಲೈ 17ಕ್ಕೆ, ಮುಂಬೈಯಿಂದ ಜುಲೈ 14 ಮತ್ತು 21ಕ್ಕೆ ಹಾಗೂ ಶ್ರೀನಗರದಿಂದ ಜುಲೈ 21ಕ್ಕೆ ಪ್ರಯಾಣ ಬೆಳೆಸಲಿವೆ. ಎರಡನೇ ಹಂತದಲ್ಲಿ, ವಿಮಾನಗಳು, ಅಹ್ಮದಾಬಾದ್, ಜೈಪುರ ಮತ್ತು ಲಕ್ನೋದಿಂದ ಜುಲೈ 20ಕ್ಕೆ, ಭೋಪಾಲ ಮತ್ತು ರಾಂಚಿಯಿಂದ ಜುಲೈ 21ಕ್ಕೆ, ಔರಂಗಾಬಾದ್‌ನಿಂದ ಜುಲೈ 22ಕ್ಕೆ, ಕೋಲ್ಕತಾ ಮತ್ತು ನಾಗ್ಪುರದಿಂದ ಜುಲೈ 25ಕ್ಕೆ, ಹೈದರಾಬಾದ್‌ನಿಂದ ಜುಲೈ 26ಕ್ಕೆ, ವಾರಣಾಸಿಯಿಂದ ಜುಲೈ 29ಕ್ಕೆ ಮತ್ತು ಚೆನ್ನೈಯಿಂದ ಜುಲೈ 31ಕ್ಕೆ ಹಜ್‌ಗೆ ಪ್ರಯಾಣ ಬೆಳೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News