ಮನ‌ಮೋಹನ್ ಸಿಂಗ್ ಕಚೇರಿ ಸಿಬ್ಬಂದಿ ಸಂಖ್ಯೆಯನ್ನು 5ಕ್ಕೆ ಇಳಿಸಿದ ಕೇಂದ್ರ

Update: 2019-06-25 16:13 GMT

ಹೊಸದಿಲ್ಲಿ, ಜೂ.25: ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಕಚೇರಿಯ ಸಿಬ್ಬಂದಿ ಸಂಖ್ಯೆಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಐದಕ್ಕೆ ಇಳಿಸಿದೆ. ತನ್ನ ಕಚೇರಿಯ ಕಾರ್ಯಗಳು ಸುಗಮವಾಗಿ ನಡೆಯಲು 14 ಸಿಬ್ಬಂದಿಗಳನ್ನು ಉಳಿಸಬೇಕು ಎನ್ನುವ ಸಿಂಗ್ ಅವರ ಮನವಿಗಳನ್ನೂ ಕೇಂದ್ರ ಸರಕಾರ ಕಡೆಗಣಿಸಿದೆ.

ಮೇ 26ರಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಮನಮೋಹನ್ ಸಿಂಗ್ ಕಚೇರಿಯ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿ ಕೇವಲ ಇಬ್ಬರು ಆಪ್ತ ಸಹಾಯಕರು, ಓರ್ವ ಕೆಲದರ್ಜೆಯ ಗುಮಾಸ್ತ ಮತ್ತು ಇಬ್ಬರು ಪಿಯೋನ್‌ಗಳನ್ನು ಉಳಿಸಿತ್ತು. ಈ ಬಗ್ಗೆ ಮೇ 26ರಂದು ಸಿಂಗ್ ಅವರಿಗೆ ಮಾಹಿತಿ ನೀಡಿದ್ದ ಪಿಎಂಒ, ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿಗೆ ನೀಡಲಾಗಿರುವ ಸವಲತ್ತುಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ತಿಳಿಸಿತ್ತು. ಮನ್‌ಮೋಹನ್ ಸಿಂಗ್ ಅವರ 2004ರಿಂದ 2014ರ ಅವಧಿಯಲ್ಲಿ ಎರಡು ಬಾರಿ ಯುಪಿಎ ನೇತೃತ್ವದ ಸರಕಾರದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

 1991-96ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹ ರಾವ್ ಅವರ ಅವಧಿಯಲ್ಲಿ, ಮಾಜಿ ಪ್ರಧಾನಿಗಳಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡಲಾಗುವ ಸವಲತ್ತುಗಳನ್ನು ಐದು ವರ್ಷಗಳ ಕಾಲ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ಈ ಸವಲತ್ತುಗಳಲ್ಲಿ 14 ಕಾರ್ಯಾಲಯ ಸಿಬ್ಬಂದಿ, ಉಚಿತ ಕಚೇರಿ ವೆಚ್ಚ, ವೈದ್ಯಕೀಯ ಸೌಲಭ್ಯಗಳು, ಆರು ದೇಶೀಯ ಎಕ್ಸಿಕ್ಯುಟಿವ್ ವಿಮಾನ ಟಿಕೆಟ್‌ಗಳು ಮತ್ತು ಒಂದು ವರ್ಷ ಕಾಲ ಎಸ್‌ಪಿಜಿ ಭದ್ರತೆ ಸೇರಿದೆ. ಆದರೆ ಅಂದಿನಿಂದ ಮಾಜಿ ಪ್ರಧಾನಿಗಳ ಮನವಿಯ ಮೇರೆಗೆ ಈ ಸವಲತ್ತುಗಳನ್ನು ಐದು ವರ್ಷಗಳ ನಂತರವೂ ವಿಸ್ತರಿಸುವ ಅಲಿಖಿತ ನಿಯಮವೊಂದು ಹುಟ್ಟಿಕೊಂಡಿತ್ತು.

 ಮೂಲಗಳ ಪ್ರಕಾರ, ಬಿಜೆಪಿ ಸರಕಾರ ಇದೇ ಮೊದಲ ಬಾರಿ ಕಾನೂನು ಪುಸ್ತಕದಲ್ಲಿರುವ ನಿಯಮವನ್ನು ಪಾಲಿಸಿದೆ. ಹಿಂದಿನ ಸರಕಾರಗಳು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ ನರಸಿಂಹ ರಾವ್ ಮತ್ತು ಐ.ಕೆ ಗುಜ್ರಾಲ್ ಅವರಿಗೆ ನೀಡಲಾಗಿದ್ದ ಸವಲತ್ತುಗಳನ್ನು ಅವಧಿಯ ನಂತರವೂ ವಿಸ್ತರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News