ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದವರಿಗೆ ಮೋದಿ,ಶಾ ನಮನ

Update: 2019-06-25 15:37 GMT

ಹೊಸದಿಲ್ಲಿ,ಜೂ.25: ಸರಿಯಾಗಿ 45 ವರ್ಷಗಳ ಹಿಂದೆ 1975ರಲ್ಲಿ ಇದೇ ದಿನ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಪ್ರತಿರೋಧಿಸಿದ್ದ ಎಲ್ಲರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಮನಗಳನ್ನು ಸಲ್ಲಿಸಿದ್ದಾರೆ.

‘‘ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ಮತ್ತು ನಿರ್ಭೀತಿಯಿಂದ ವಿರೋಧಿಸಿದ್ದ ಎಲ್ಲ ಮಹನೀಯರನ್ನು ಭಾರತವು ವಂದಿಸುತ್ತದೆ, ಭಾರತದ ಪ್ರಜಾಪ್ರಭುತ್ವ ಶಕ್ತಿಯು ಸರ್ವಾಧಿಕಾರಿ ಮನೋಸ್ಥಿತಿಯ ವಿರುದ್ಧ ಗೆಲುವು ಸಾಧಿಸಿತ್ತು ’’ ಎಂದು ಮೋದಿ ಟ್ವೀಟಿಸಿದ್ದಾರೆ.

ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದನ್ನು ಮತ್ತು ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದನ್ನು ನೆನಪಿಸಿಕೊಂಡಿರುವ ಗೃಹಸಚಿವ ಅಮಿತ್ ಶಾ ಅವರು,‘‘ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಲಕ್ಷಾಂತರ ಜನರು ಕಷ್ಟಗಳನ್ನು ಅನುಭವಿಸಿದ್ದರು. ಆ ಎಲ್ಲ ಸೈನಿಕರಿಗೆ ನನ್ನ ವಂದನೆಗಳು ’’ಎಂದು ಟ್ವೀಟಿಸಿದ್ದಾರೆ.

ತುರ್ತು ಪರಿಸ್ಥಿತಿಯು ‘ಕಪ್ಪು ಕಳಂಕವಾಗಿತ್ತು ’ಎಂದು ಬಣ್ಣಿಸಿರುವ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು, ‘‘1975ರ ಈ ದಿನ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಉಳಿಯಲು ಪ್ರಜಾಪ್ರಭುತ್ವದ ಕೊಲೆಯನ್ನು ಮಾಡಿತ್ತು. ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದ ನೇತೃತ್ವ ವಹಿಸಿದ್ದ ಭಾರತೀಯ ಜನಸಂಘ ಮತ್ತು ಆರೆಸ್ಸೆಸ್‌ನ ಸಾವಿರಾರು, ಪ್ರಶಂಸೆಗೆ ನಿಲುಕದ ನಾಯಕರನ್ನು ಕೃತಜ್ಞ ದೇಶವು ನೆನಪಿಸಿಕೊಳ್ಳುತ್ತಿದೆ ’’ಎಂದು ಟ್ವೀಟಿಸಿದ್ದಾರೆ.

ತುರ್ತು ಪರಿಸ್ಥಿತಿಯು ದೇಶದ ಇತಿಹಾಸದ ಕರಾಳ ಅಧ್ಯಾಯಗಳಲ್ಲೊಂದಾಗಿತ್ತು ಎಂದು ಟ್ವೀಟಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘‘ಈ ದಿನದಂದು ನಾವು ಭಾರತೀಯರು ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಂವಿಧಾನದ ಸಮಗ್ರತೆಯನ್ನು ಎತ್ತಿ ಹಿಡಿಯುವದರ ಮಹತ್ವನ್ನು ನೆನಪಿಸಿಕೊಳ್ಳಬೇಕು ’’ ಎಂದಿದ್ದಾರೆ.

1975,ಜೂ.25ರಿಂದ 1977,ಮಾ.21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News