ಕೊಲ್ಕತಾದಲ್ಲಿ ನಾಲ್ವರು ಐಸಿಸ್ ಉಗ್ರರ ಬಂಧನ

Update: 2019-06-25 15:43 GMT

ಕೋಲ್ಕತಾ,ಜೂ.25: ಕೋಲ್ಕತಾ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಅಧಿಕಾರಿಗಳು ನಿಯೊ ಜಮಾಅತುಲ್ ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಇದರ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ನಿಯೊ ಜೆಎಂಬಿ ಐಸಿಸ್‌ನ ಅಂಗ ಸಂಸ್ಥೆಯಾಗಿದ್ದು, ಡಾಕಾದಲ್ಲಿ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ನಡೆಸಿತ್ತು. ನಿಯೊ ಜೆಎಂಬಿಯು ಜೆಎಂಬಿ ಸಂಘಟನೆಯಿಂದ ಪ್ರತ್ಯೇಕಗೊಂಡ ಉಗ್ರ ಸಂಘಟನೆಯಾಗಿದ್ದು, ಸದ್ಯ ಐಸಿಸ್ ಅಡಿಯಲ್ಲಿ ಕಾರ್ಯಾಚರಿಸುತ್ತದೆ.

 ಮುಹಮ್ಮದ್ ಜಿಯಾವುರ್ರಹ್ಮಾನ್ ಮತ್ತು ಮಾಮುನುರ್ರಶೀದ್ ಎಂಬ ಬಾಂಗ್ಲಾದೇಶಿ ಮೂಲದ ಉಗ್ರರನ್ನು ಕೋಲ್ಕತಾದ ಸೀಲ್ಡಾ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಂಧಿಸಲಾಗಿದೆ. ಅವರಿಂದ ಫೋಟೊಗಳು,ವೀಡಿಯೊಗಳು, ಬರಹಗಳು ಮತ್ತು ಸಾಹಿತ್ಯವಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಳಿದಿಬ್ಬರು ಉಗ್ರರನ್ನು ಮುಹಮ್ಮದ್ ಸಾಹಿನ್ ಆಲಂ ಮತ್ತು ರಬೀವುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ಅವರನ್ನು ಹೌರಾ ನಿಲ್ದಾಣದ ಬಳಿ ಬಂಧಿಸಲಾಗಿದೆ. ಆಲಮ್ ಬಾಂಗ್ಲಾದೇಶಿಯಾಗಿದ್ದರೆ ಇಸ್ಲಾಂ ಭಾರತೀಯ ಪ್ರಜೆಯಾಗಿದ್ದಾನೆ.

ಇಸ್ಲಾಂ, ನಿಷೇಧಿತ ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದ ಮತ್ತು ಜನರನ್ನು ನೇಮಕ ಮಾಡುವ ಮತ್ತು ಭಾರತದಿಂದ ಹಣ ಸಂಗ್ರಹಿಸುವ ಮೂಲಕ ಸಂಘಟನೆಗೆ ನೆರವಾಗುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಬಂಧಿತ ಬಾಂಗ್ಲಾದೇಶಿ ಉಗ್ರರು ತಮ್ಮ ದೇಶದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಭಾರತದಲ್ಲಿ ಅಡಗಿಕೊಂಡಿದ್ದರು ಮತ್ತು ಐಸಿಸ್‌ನಡಿ ಜನರನ್ನು ನೇಮಕ ಮಾಡುತ್ತಿದ್ದರು ಹಾಗೂ ಹಣ ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News