ನಮೋ ಟಿವಿ ಪ್ರಸಾರ ಇಲಾಖೆಯ ಪಟ್ಟಿಯಲ್ಲಿಲ್ಲ: ಕೇಂದ್ರ

Update: 2019-06-25 15:47 GMT

ಹೊಸದಿಲ್ಲಿ, ಜೂ.25: ನಮೋ ಟಿವಿ ಸರಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಚಾನೆಲ್‌ಗಳ ಪಟ್ಟಿಯಲ್ಲಿಲ್ಲ ಮತ್ತು ಅದೊಂದು ವೇದಿಕೆ ಸೇವೆಯಾಗಿದ್ದು, ಡಿಟಿಎಚ್ ನಿರ್ವಾಹಕರು ತಮ್ಮ ಚಂದಾದಾರರಿಗೆ ಒದಗಿಸುತ್ತಿದ್ದರು ಎಂದು ಸರಕಾರ ರಾಜ್ಯ ಸಭೆಯಲ್ಲಿ ತಿಳಿಸಿದೆ.

 ಪ್ರಧಾನಿ ನರೇಂದ್ರ ಮೋದಿಯವರ ಸಭೆಗಳು ಮತ್ತು ಇತರ ಚುನಾವಣಾ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದ ಬಿಜೆಪಿ ಪ್ರಾಯೋಜಿತ ನಮೋ ಟಿವಿ ಕಳೆದ ತಿಂಗಳು ಲೋಕಸಭಾ ಚುನಾವಣೆಯ ನಂತರ ಪ್ರಸಾರವನ್ನು ನಿಲ್ಲಿಸಿತ್ತು. ಈ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್‌ ಲಿಖಿತ ಉತ್ತರ ನೀಡಿದರು. ನಮೋ ಟಿವಿ ಪ್ರಸಾರ ಆರಂಭವಾದಂದಿನಿಂದ ವಿವಾದಕ್ಕೆ ಗ್ರಾಸವಾಗಿತ್ತು. ನಮೋ ಟಿವಿಯಲ್ಲಿ ಚುನಾವಣಾ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ವಿರುದ್ಧ ದಿಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಬಿಜೆಪಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ನಮೋ ಟಿವಿಯಿಂದ ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿತ್ತು.

ನಮೋ ಟಿವಿಯಲ್ಲಿ ಪ್ರಸಾರವಾಗುವ ದಾಖಲಿತ ಕಾರ್ಯಕ್ರಮಗಳಿಗೆ ಪೂರ್ವ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂದು ಎಪ್ರಿಲ್‌ನಲ್ಲಿ ಚುನಾವಣಾ ಆಯೋಗ ಸೂಚಿಸಿತ್ತು. ತನ್ನ ಪ್ರಮಾಣಪತ್ರವಿಲ್ಲದೆ ನಮೋ ಟಿವಿಯಲ್ಲಿ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡಬಾರದು ಎಂದು ದಿಲ್ಲಿ ಚುನಾವಣಾ ಆಯುಕ್ತರು ಸೂಚಿಸಿದ್ದರು. ನಮೋ ಟಿವಿಯಿಂದ ನೀತಿ ಸಂಹಿತೆ ಉಲ್ಲಂಘಟನೆಯಾಗುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ನಮೋ ಟಿವಿ ಬಗ್ಗೆ ವರದಿಯನ್ನು ನೀಡುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News