ಇವಿಎಂನಲ್ಲಿ ಯಾವುದೇ ದೋಷವಿಲ್ಲ ಎಂದು ಚು. ಆಯೋಗ ತಿಳಿಸಿದೆ: ರವಿಶಂಕರ್ ಪ್ರಸಾದ್

Update: 2019-06-27 14:20 GMT

ಹೊಸದಿಲ್ಲಿ,ಜೂ.27: ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿದ ಮತದಾರರ ಸಂಖ್ಯೆ ಮತ್ತು ಮತಯಂತ್ರಗಳಲ್ಲಿ ದಾಖಲಾದ ಮತಗಳ ಮಧ್ಯೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

 ರಾಜ್ಯಸಭೆಯಲ್ಲಿ ಪ್ರಶ್ನಾವಳಿ ಅವಧಿಯ ವೇಳೆ ಈ ಬಗ್ಗೆ ಮಾತನಾಡಿದ ಪ್ರಸಾದ್, ಇವಿಎಂನಲ್ಲಿ ದೋಷವಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಮತ್ತು ಈ ಮತಯಂತ್ರಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ಇವಿಎಂ ಕಾರ್ಯಾಚರಣೆ ಬಗ್ಗೆ ಮತ್ತು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ಮತ ಎಣಿಕೆಯ ಮಧ್ಯೆ ವ್ಯತ್ಯಾಸವಿದೆ ಎಂದು ದೂರುಗಳು ಬಂದಿವೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ ಹಿನ್ನೆಲೆಯಲ್ಲಿ ಕಾನೂನು ಸಚಿವರು ಈ ಉತ್ತರ ನೀಡಿದ್ದಾರೆ.

ಮತದಾನದ ಸಮಯದಲ್ಲಿ ಇವಿಎಂಗಳಲ್ಲಿ ಸಮಸ್ಯೆಗಳು ಕಂಡುಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣಾ ಆಯೋಗದ ಪರವಾಗಿ ಮಾತನಾಡುವುದಾದರೆ, ವಿವಿಪ್ಯಾಟ್‌ಗಳಲ್ಲಿ ಮತ ಎಣಿಕೆಯ ಬಗ್ಗೆ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ. ಯಾವುದೇ ದೂರುಗಳು ಇದ್ದರೆ ಅವುಗಳನ್ನು ಸ್ಥಳದಲ್ಲೇ ರಿಟರ್ನಿಂಗ್ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಸಮ್ಮುಖದಲ್ಲಿ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News