ಪಶ್ಚಿಮ ಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಿ: ತೃಣಮೂಲ ಸಂಸದ
ಹೊಸದಿಲ್ಲಿ, ಜೂ.27: ಬೆಂಗಾಳಿ ಜನರ ನೈಜ ಗುರುತನ್ನು ಮರುಸ್ಥಾಪಿಸುವ ಉದ್ದೇಶದಿಂದ ಬೆಂಗಾಳಿ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪಶ್ಚಿಮ ಬಂಗಾಳದ ಹೆಸರನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡುವಂತೆ ತೃಣಮೂಲ ಕಾಂಗ್ರೆಸ್ ಗುರುವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯದ ಹೆಸರನ್ನು ಬದಲಾಯಿಸಲು ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಕಳೆದ ವರ್ಷ ಜುಲೈಯಲ್ಲಿ ಮಸೂದೆಯನ್ನು ಜಾರಿ ಮಾಡಲಾಗಿತ್ತು. ಆದರೆ ಇದು ಕೇಂದ್ರ ಸರಕಾರದ ಅಂಗೀಕಾರಕ್ಕೆ ಬಾಕಿಯುಳಿದಿದೆ. ಆದರೆ ಕೇಂದ್ರ ಸರಕಾರ ರಾಜ್ಯದ ಹೆಸರು ಬದಲಿಸುವಲ್ಲಿ ಉತ್ಸಾಹ ತೋರಿಸುತ್ತಿಲ್ಲ ಎಂದು ರಾಯ್ ತಿಳಿಸಿದ್ದಾರೆ.
ಬಂಗಾಳಿ ಜನರ ನೈಜ ಗುರುತನ್ನು ಪುನರ್‌ಸ್ಥಾಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆಯಲ್ಲಿ ಜಾರಿ ಮಾಡಲಾದ ನಿರ್ಣಯವನ್ನು ಅಂಗೀಕರಿಸುವಂತೆ ರಾಯ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಬಾಂಗ್ಲಾ ಎಂಬ ಶಬ್ದವನ್ನು ಈ ಪ್ರದೇಶದಲ್ಲಿ ಕ್ರಿಸ್ತಪೂರ್ವ 1000ದ ಆಸುಪಾಸಿನಲ್ಲಿ ನೆಲೆಸಿದ್ದ ದ್ರಾವಿಡ ಬುಡಕಟ್ಟು ಜನಾಂಗವಾದ ಬಂಗದಿಂದ ಪಡೆದುಕೊಳ್ಳಲಾಗಿದೆ ಎಂದು ರಾಯ್ ರಾಜ್ಯಸಭೆಗೆ ತಿಳಿಸಿದ್ದಾರೆ.