×
Ad

ವಿಜ್ಞಾನ ಶಿಕ್ಷಕರಿಲ್ಲದಿದ್ದರೂ ಜೆಇಇ ಮೈನ್ ತೇರ್ಗಡೆಯಾದ ಕಾರ್ಮಿಕನ ಪುತ್ರ

Update: 2019-06-27 22:40 IST

ಜಲವರ್, ಜೂ.27: ಎಂನರೇಗಾ ಕಾರ್ಮಿಕನ ಪುತ್ರ ಲೇಖರಾಜ ಭೀಲ್ ತನಗೆ ಎದುರಾದ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಜೆಇಇ ಮೈನ್ ತೇರ್ಗಡೆ ಹೊಂದಿ ಅಪೂರ್ವ ಸಾಧನೆ ಮಾಡಿದ್ದಾರೆ.

 ಜೆಇಇ ಮೈನ್‌ನ ಫಲಿತಾಂಶ ಕಳೆದ ಎಪ್ರಿಲ್‌ನಲ್ಲಿ ಹೊರಬಂದಿತ್ತು. ಈ ಸಾಧನೆ ಮಾಡಿರುವ ಭೀಲ್, ಮೇಣದ ಬೆಳಕಿನ ಅಡಿಯಲ್ಲಿ ಓದಿ ಹತ್ತನೇ ತರಗತಿಯಲ್ಲಿ ಶೇ.90 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಆ ಸಮಯದಲ್ಲಿ ಪ್ರವೇಶ ಪರೀಕ್ಷೆಗಳ ಬಗ್ಗೆ ಭೀಲ್‌ಗೆ ತಿಳಿದಿರಲಿಲ್ಲ. ಕಾರ್ಮಿಕರಾಗಿ ದುಡಿಯುತ್ತಿರುವ ತನ್ನ ಹೆತ್ತವರಿಗೆ ಆರ್ಥಿಕವಾಗಿ ನೆರವಾಗಲು ಏನಾದರೂ ಮಾಡಬೇಕು ಎನ್ನುವುದಷ್ಟೇ ಅವರ ಕನಸಾಗಿತ್ತು.

 ಲೇಖರಾಜ್ ಭೀಲ್ ಕೇವಲ ತನ್ನ ಹೆತ್ತವರ ಕನಸನ್ನು ಈಡೇರಿಸುವುದು ಮಾತ್ರವಲ್ಲ ತನ್ನ ಗ್ರಾಮದಲ್ಲಿ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾನೆ. ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು ಶಿಕ್ಷಕರು ಇಲ್ಲದಿದ್ದರೂ ಭೀಲ್ ಈ ವಿಷಯಗಳಲ್ಲಿ ಕ್ರಮವಾಗಿ 96 ಮತ್ತು 97 ಅಂಕಗಳನ್ನು ಪಡೆದುಕೊಂಡಿದ್ದಾನೆ ಎಂದು ಆತನ ಶಿಕ್ಷಕರು ತಿಳಿಸಿದ್ದಾರೆ.

ತನ್ನ ಈ ಸಾಧನೆಗೆ ನೆರವಾದ ಶಿಕ್ಷಕ ಜಸ್‌ರಾಜ್ ಸಿಂಗ್ ಗುಜ್ಜರ್, ಪ್ರಾಂಶುಪಾಲ ಮತ್ತು ಕೋಟಾದ ಕೋಚಿಂಗ್ ತರಗತಿಯ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಭೀಲ್ ತಿಳಿಸಿದ್ದಾರೆ. ಸದ್ಯ ಲೇಖರಾಜ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News