ರಕ್ತ ಸುರಿಯುತ್ತಿದ್ದರೂ ತಬ್ರೇಝ್ ಗೆ ಚಿಕಿತ್ಸೆ ನಿರಾಕರಿಸಿದ್ದ ಪೊಲೀಸರು: ವರದಿ

Update: 2019-06-27 18:39 GMT

► ಕೃತ್ಯವನ್ನು ಸಮರ್ಥಿಸಿದ ಸ್ಥಳೀಯ ದುಷ್ಕರ್ಮಿಗಳ ಗುಂಪು

ಹೊಸದಿಲ್ಲಿ, ಜೂ.27: ಜಾರ್ಖಂಡ್‌ನಲ್ಲಿ ಗುಂಪಿನಿಂದ ಥಳಿತಕ್ಕೆ ಒಳಗಾಗಿ ಗಂಭೀರ ಗಾಯದಿಂದ ಬಳಿಕ ಮೃತಪಟ್ಟಿದ್ದ ತಬ್ರೇಝ್ ಅನ್ಸಾರಿಗೆ ಚಿಕಿತ್ಸೆ ಒದಗಿಸುವಂತೆ ಪೊಲೀಸರನ್ನು ಕುಟುಂಬದವರು ಬೇಡಿಕೊಂಡರೂ ಪೊಲೀಸರು ನಿರಾಕರಿಸಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

‘ಜೈಶ್ರೀರಾಂ’ ಹಾಗೂ ‘ಜೈ ಹನುಮಾನ್’ ಎಂದು ಘೋಷಿಸುವಂತೆ ಅನ್ಸಾರಿಯನ್ನು ಬಲವಂತ ಮಾಡಿದ್ದ ತಂಡವು ಬಳಿಕ ತೀವ್ರ ಹಲ್ಲೆ ನಡೆಸಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಅನ್ಸಾರಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ಈ ಸಂದರ್ಭ ಅವರ ಮೈಯಿಂದ ರಕ್ತ ಸುರಿಯುತ್ತಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಬೇಕೆಂದು ಬೇಡಿಕೊಂಡರೂ ಪೊಲೀಸರು ನಿರಾಕರಿಸಿದ್ದರಲ್ಲದೆ ತಮಗೆ ಎಚ್ಚರಿಕೆ ನೀಡಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಪರಿಶೀಲನೆ ನಡೆಸಲು ಜಾರ್ಖಂಡ್ ಜನಾಧಿಕಾರಿ ಮಹಾಸಭಾದ ಸತ್ಯಶೋಧನಾ ತಂಡವು ಘಟನೆ ನಡೆದಿದ್ದ ಜಾರ್ಖಂಡ್‌ನ ಕಡಮಿದಿಹ ಮತ್ತು ಧಕ್ತಿದಿಹ ಗ್ರಾಮಕ್ಕೆ ಜೂನ್ 25ರಂದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಮಾನವ ಹಕ್ಕು ಕಾರ್ಯಕರ್ತರು ಹಾಗೂ ವಕೀಲರನ್ನೊಳಗೊಂಡ ತಂಡವು ಅನ್ಸಾರಿಯ ಕುಟುಂಬವನ್ನು ಹಾಗೂ ನೆರೆಮನೆಯವರನ್ನು ಭೇಟಿ ಮಾಡಿತ್ತು. ಅನ್ಸಾರಿ ಕಳ್ಳತನದ ಕೃತ್ಯದಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. 24 ವರ್ಷದ ಅನ್ಸಾರಿ ಒಂದೂವರೆ ತಿಂಗಳಿನ ಹಿಂದೆಯಷ್ಟೇ ವಿವಾಹವಾಗಿದ್ದು ಪತ್ನಿಯನ್ನು ತಾನು ಕೆಲಸ ಮಾಡುತ್ತಿದ್ದ ಪುಣೆಗೆ ಕರೆದೊಯ್ಯಲು ನಿರ್ಧರಿಸಿದ್ದರು.

ಆದರೆ, ಘಟನೆ ನಡೆದ ಧಕ್ತಿದಿಹ್ ಎಂಬ ಸ್ಥಳಕ್ಕೆ ಸತ್ಯಶೋಧನಾ ತಂಡ ಭೇಟಿ ನೀಡಿ ಸ್ಥಳೀಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದಾಗ ಅವರನ್ನು ಅಡ್ಡಿಪಡಿಸಿದ ತಂಡವೊಂದು ತಾವು ‘ಜೈ ಶ್ರೀರಾಂ ವಾಲೆ’ ಜನರು ಹಾಗೂ ಕಳ್ಳನಿಗೆ ಯಾವುದೇ ಧರ್ಮವಿಲ್ಲ. ಆತ ಹಿಂದೂ ಇರಲಿ, ಮುಸ್ಲಿಮ್ ಇರಲಿ, ಆತ ಕಳ್ಳನೇ. ಆದ್ದರಿಂದ ಅವನಿಂದ ‘ಜೈ ಶ್ರೀರಾಂ’ ಎಂದು ಹೇಳಿಸುವುದರಲ್ಲಿ ತಪ್ಪಿಲ್ಲ ಎಂದು ವಾದಿಸಿದೆ. ಧಕ್ತಿದಿಹ್ ಪ್ರದೇಶದಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಕೋಮು ಜಗಳ ನಡೆಯುವುದೇ ಅಪರೂಪ ಎಂದು ಸ್ಥಳೀಯರು ಹೇಳಿದ್ದಾರೆ.

ವರದಿಯಲ್ಲಿ ಏನಿದೆ: ಜೂನ್ 17ರಂದು ರಾತ್ರಿ 10 ಗಂಟೆಗೆ ಅನ್ಸಾರಿ ತನ್ನ ಪತ್ನಿಗೆ ಜಮ್‌ಶೆಡ್‌ಪುರದಿಂದ ಕರೆ ಮಾಡಿದ್ದಾರೆ. ಅನ್ಸಾರಿ ತನ್ನ ಸಂಬಂಧಿಕರನ್ನು ಭೇಟಿಯಾಗಲು ಇಲ್ಲಿಗೆ ಗ್ರಾಮದ 14 ವರ್ಷದ ಇಬ್ಬರು ಹುಡುಗರೊಂದಿಗೆ ಆಗಮಿಸಿದ್ದು ಅದೇ ರಾತ್ರಿ ಊರಿಗೆ ಮರಳುವುದಾಗಿ ಪತ್ನಿಗೆ ತಿಳಿಸಿದ್ದರು. ಅನ್ಸಾರಿ ಬೈಕೊಂದನ್ನು ತೆಗೆದುಕೊಂಡಿದ್ದು, ಆತನನ್ನು ಥಳಿಸಿದ್ದು ಇದೇ ಕಾರಣಕ್ಕೆ ಎಂಬುದು ಹಲ್ಲೆಕೋರರ ಹೇಳಿಕೆಯಾಗಿದೆ.

ಮರುದಿನ ಬೆಳಿಗ್ಗೆಯೂ ಅನ್ಸಾರಿಯ ಪತ್ನಿಗೆ ಪತಿಯಿಂದ ಕರೆ ಬಂದಿತ್ತು. ತನ್ನನ್ನು ಧಕ್ತಿದಿಹ್ ಗ್ರಾಮದಲ್ಲಿ ಥಳಿಸಲಾಗುತ್ತಿದ್ದು, ಹೇಗಾದರೂ ಮಾಡಿ ರಕ್ಷಿಸಬೇಕೆಂದು ಕೋರಿದ್ದರು. ಆಕೆ ತಕ್ಷಣ ಮಾವಂದಿರಾದ ಮಕ್ಸುದ್ ಆಲಂ ಹಾಗೂ ಮಸ್ರೂರ್ ಆಲಂರಿಗೆ ತಿಳಿಸಿದ್ದು ಅವರು ಅನ್ಸಾರಿಯನ್ನು ಭೇಟಿಯಾಗಲು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಅನ್ಸಾರಿ ಅಲ್ಲಿರಲಿಲ್ಲ, ಅವರನ್ನು ಸಾರೈಕೇಲ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಇರಿಸಲಾಗಿತ್ತು. ಬಾಯಿ, ತಲೆ ಮತ್ತು ಮೂಗಿನಿಂದ ರಕ್ತ ಸುರಿಯುತ್ತಿತ್ತು, ಬೆರಳುಗಳ ಮೇಲೆ ಆಳವಾದ ಗಾಯದ ಗುರುತಿತ್ತು. ಆತ ಕದಿಯುತ್ತಿದ್ದಾಗ ಸೆರೆ ಸಿಕ್ಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ಸಾರಿ ಗಂಭೀರ ಗಾಯಗೊಂಡಿರುವುದರಿಂದ ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವಂತೆ ಮಕ್ಸೂದ್ ಪೊಲೀಸ್ ಅಧಿಕಾರಿಗೆ ವಿನಂತಿಸಿದ್ದಾರೆ. ಆಗ ಆ ಅಧಿಕಾರಿ ‘ಇಲ್ಲಿಂದ ತೊಲಗು, ಇಲ್ಲದಿದ್ದರೆ ನಿನ್ನ ಮೂಳೆ ಮುರಿದು ನಿನ್ನನ್ನೂ ಜೈಲಿಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಕಪ್‌ನಲ್ಲಿದ್ದ ಅನ್ಸಾರಿ ತನ್ನ ಬಂಧುಗಳೊಂದಿಗೆ ಮಾತನಾಡಿದ್ದು, ತಾನು ಜಮ್‌ಶೆಡ್‌ಪುರದಿಂದ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದಾಗ ತಡೆದ ಕೆಲವು ವ್ಯಕ್ತಿಗಳು ಹೆಸರು ಕೇಳಿದ್ದಾರೆ. ಮೊದಲು ಸೋನು ಎಂದು ಹೇಳಿದ್ದೆ. ಬಳಿಕ ಅವರು ನಿಜ ಹೆಸರು ಹೇಳುವಂತೆ ಬಲವಂತಗೊಳಿಸಿದರು. ಹೆಸರು ಹೇಳಿದ ತಕ್ಷಣ ಮುಗಿಬಿದ್ದು ಥಳಿಸಿದ್ದಾರೆ. ಜತೆಗಿದ್ದ ಇಬ್ಬರು ಹುಡುಗರು ಓಡಿಹೋಗಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಅಲ್ಲಿಯೂ ಥಳಿಸಲಾಗಿದೆ. ತಾನು ನೀರು ಕೇಳಿದಾಗ ವಿಷಕಾರಿ ಕಳೆಯ ರಸವನ್ನು ಬಾಯಿಗೆ ಸುರಿದಿದ್ದಾರೆ ಎಂದು ಹೇಳಿದ್ದಾರೆ.

ತನ್ನನ್ನು ಥಳಿಸಿದವರಲ್ಲಿ ಒಬ್ಬನ ಹೆಸರು ಪಪ್ಪು ಮಂಡಲ್ ಎಂದಾಗಿದೆ ಎಂದೂ ಅನ್ಸಾರಿ ತಿಳಿಸಿದ್ದರು. ಅನ್ಸಾರಿಯನ್ನು ಭೇಟಿ ಮಾಡಲು ಸಂಬಂಧಿಕರು ಠಾಣೆಗೆ ಹೋಗಿದ್ದ ಸಂದರ್ಭ ಅಲ್ಲಿಗೆ ಪಪ್ಪು ಮಂಡಲ್ ತನ್ನ 15 ಜನ ಬೆಂಬಲಿಗರೊಂದಿಗೆ ಆಗಮಿಸಿದ್ದು , ಅನ್ಸಾರಿಯನ್ನು ಕಂಡು ಆತ ‘ಅಷ್ಟು ಹೊಡೆದಿದ್ದರೂ ನೀನಿನ್ನೂ ಸತ್ತಿಲ್ಲವೇ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕುಟುಂಬದವರ ನಿರಂತರ ಕೋರಿಕೆಯ ಬಳಿಕವೂ ಅನ್ಸಾರಿಗೆ ಚಿಕಿತ್ಸೆ ಒದಗಿಸಿಲ್ಲ. ಜೂನ್ 19ರಂದು ಅವರನ್ನು ಸ್ಥಳೀಯ ಜೈಲಿಗೆ ಸ್ಥಳಾಂತರಿಸಲಾಗಿದೆ. ಆಗ ಅವರಿಗೆ ನಡೆಯಲೂ ಆಗುತ್ತಿರಲಿಲ್ಲ.

ಜೂನ್ 22ರಂದು ಅನ್ಸಾರಿಯನ್ನು ಸರಾಯ್‌ಕೆಲ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾಗಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಗೆ ತೆರಳಿದಾಗ ಅನ್ಸಾರಿಯ ಬಾಯಿಯಿಂದ ನೊರೆ ಬರುತ್ತಿತ್ತು. ಆಗ ವೈದ್ಯರು ಅನ್ಸಾರಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆದರೆ ಆತ ಆಗಲೂ ಉಸಿರಾಡುತ್ತಿದ್ದರು ಎಂದು ಸ್ಥಳೀಯ ವರದಿಗಾರ ತಿಳಿಸಿದ್ದಾನೆ. ಆಗ ಅನ್ಸಾರಿಯನ್ನು ಜಮ್‌ಶೆಡ್‌ಪುರದ ಟಾಟಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ. ಆದರೆ ಜಮ್‌ಶೆಡ್‌ಪುರದ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅನ್ಸಾರಿ ಮೃತಪಟ್ಟ ಬಳಿಕ ಕುಟುಂಬದವರು ಪಪ್ಪು ಮಂಡಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ಧಾರೆ.

ಥಳಿತದ ಬಳಿಕ ಅನ್ಸಾರಿಯ ಆರೋಗ್ಯಸ್ಥಿತಿ ಗಂಭೀರವಾದ ಕಾರಣ ಆತನ ವಿರುದ್ಧ ಕಳ್ಳತನದ ಆರೋಪ ಹೊರಿಸಲಾಗಿದೆ ಎಂದು ಅನ್ಸಾರಿಯ ಕುಟುಂಬದವರು ಆರೋಪಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪೊಲೀಸರ ಕರ್ತವ್ಯಲೋಪ

ಈ ಪ್ರಕರಣದಲ್ಲಿ ಪೊಲೀಸರು ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಮಿತಿಯು ಕುಟುಂಬದವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಅಲ್ಲದೆ ಧಾರ್ಮಿಕ ಹಿಂಸಾಚಾರದಲ್ಲಿ ಕ್ರೂರತೆಯ ಪರಾಕಾಷ್ಟೆ ಮೆರೆಯಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News