×
Ad

ಬಿಜೆಪಿ ವಿರುದ್ಧ ಹೋರಾಟ: ಮಮತಾ ಮನವಿ ತಿರಸ್ಕರಿಸಿದ ಸಿಪಿಐ,ಸಿಪಿಎಂ, ಕಾಂಗ್ರೆಸ್

Update: 2019-06-27 22:44 IST

ಕೋಲ್ಕತಾ,ಜೂ.27: ಬಿಜೆಪಿಯನ್ನು ಸೋಲಿಸಲು ತನ್ನೊಂದಿಗೆ ಕೈಜೋಡಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮನವಿಯನ್ನು ಸಿಪಿಐ, ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಗುರುವಾರ ತಳ್ಳಿಹಾಕಿವೆ.

  ‘‘ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳ ನೂರಾರು ಕಚೇರಿಗಳನ್ನು ಈಗಲೂ ತೃಣಮೂಲ ಕಾಂಗ್ರೆಸ್ ಆಕ್ರಮಿಸಿಕೊಂಡಿದೆ’’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಹೇಳಿದ್ದಾರೆ. ‘‘ಎಡಪಕ್ಷಗಳಿಗೆ ಸೇರಿದ ನೂರಕ್ಕೂ ಅಧಿಕ ಮಂದಿಯನ್ನು ಹತ್ಯೆಗೈಲಾಗಿದೆ. ಸಾವಿರಾರು ಮಂದಿಯನ್ನು ಅವರ ಗ್ರಾಮಗಳಿಂದ ಹೊರದಬ್ಬಲಾಗಿದೆ. ಈಗಲೂ ಆ ರೀತಿಯ ದಾಳಿಗಳು ನಡೆಯುತ್ತಲೇ ಇವೆ’’ ಎಂದವರು ಆರೋಪಿಸಿದ್ದಾರೆ.

 ಮಮತಾ ಬ್ಯಾನರ್ಜಿಯವರು ಪ್ರತಿಪಕ್ಷಗಳನ್ನು ರಾಜಕೀಯ ವಿರೋಧಿಗಳ ಹಾಗೆ ಕಾಣದೆ, ಶತ್ರುಗಳೆಂಬಂತೆ ನೋಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆಕೆ ನೀಡಿರುವ ಕೊಡುಗೆ ಅರ್ಥಹೀನವೆಂದು ಅವರು ಹೇಳಿದ್ದಾರೆ.

ದೊಡ್ಡ ಮಟ್ಟದಲ್ಲಿ ಹಿಂಸೆಯನ್ನು ಪ್ರಯೋಗಿಸಿ, ಪಶ್ಚಿಮಬಂಗಾಳದಲ್ಲಿ ಅತ್ಯಂತ ಅಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಎಡರಂಗವನ್ನು ಟಿಎಂಸಿ ದುರ್ಬಲಗೊಳಿಸಿದೆ. ಈಗ ಅವರ ಮನವಿಗೆ ಯಾವ ಅರ್ಥವಿದೆಯೆಂದು ರೆಡ್ಡಿ ಪ್ರಶ್ನಿಸಿದ್ದಾರೆ.

 ಇತ್ತ ಮಮತಾ ಅವರ ಕರೆಗೆ ಕಾಂಗ್ರೆಸ್‌ನಿಂದಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯ ವಿರುದ್ಧ ಹೋರಾಟ ನಡೆಸುವ ಬಗ್ಗೆ ನಿಜಕ್ಕೂ ಮಮತಾ ಅವರು ಗಂಭೀರವಾಗಿ ಯೋಚಿಸುತ್ತಿರುವರಾದರೆ ಅವರು ಆ ಬಗ್ಗೆ ನಮ್ಮ ಹಿರಿಯ ನಾಯಕತ್ವದ ಜೊತೆ ಮಾತನಾಡಲಿ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ. ‘‘ಮಮತಾಜಿ ಅವರ ವೈಫಲ್ಯಗಳಿಂದಾಗಿಯೇ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಬೆಳೆಯುತ್ತಾ ಹೋಗುತ್ತಿದೆ’’ ಎಂದವರು ಹೇಳಿದ್ದಾರೆ.

ಸಿಪಿಎಂ ನಾಯಕ ಮುಹಮ್ಮದ್ ಸಲೀಂ ಕೂಡಾ ಬ್ಯಾನರ್ಜಿ ಕೊಡುಗೆಯನ್ನು ತಳ್ಳಿಹಾಕಿದ್ದಾರೆ. ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕರೆ ನೀಡುವ ಹಕ್ಕನ್ನು ಕೂಡಾ ಮಮತಾ ಕಳೆದುಕೊಂಡಿದ್ದಾರೆ. ಫ್ಯಾಶಿಸಂ ವಿರುದ್ಧ ಹೋರಾಡುವಂತಹ ವಿಶ್ವಾಸಾರ್ಹತೆಯನ್ನು ಟಿಎಂಸಿ ಹೊಂದಿಲ್ಲವೆಂದು ಅವರು ಕಟಕಿಯಾಡಿದ್ದಾರೆ.

ಈ ಮಧ್ಯೆ ಪ್ರತಿಪಕ್ಷಗಳಿಗೆ ಮಮತಾ ಅವರ ಮನವಿಯನ್ನು ಬಿಜೆಪಿಯ ಪಶ್ಚಿಮಬಂಗಾಳ ಅಧ್ಯಕ್ಷ ದಿಲೀಪ್ ಘೋಷ್ ಟೀಕಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಮಮತಾ ಹೆದರಿರುವುದನ್ನು ಇದು ತೋರಿಸುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಸೋಲಲಿದ್ದಾನೆಂಬುದು ಆಕೆಗೆ ಚೆನ್ನಾಗಿ ಮನವರಿಕೆಯಾಗಿದೆ’’ ಎಂದು ಘೋಷ್ ಹೇಳಿದ್ದಾರೆ.

 ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಕ್ಷೇತ್ರಗಳ ಪೈಕಿ ಟಿಎಂಸಿ 22 ರಲ್ಲಿ ಹಾಗೂ ಬಿಜೆಪಿ 18 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News