ಮೀರತ್‌ನಿಂದ ಹಿಂದುಗಳ ವಲಸೆ ವರದಿ ನಿರಾಕರಿಸಿದ ಆದಿತ್ಯನಾಥ್

Update: 2019-06-30 16:52 GMT

ಲಕ್ನೊ, ಜೂ.30: ಮಹಿಳೆಯರಿಗೆ ಮತ್ತೊಂದು ಸಮುದಾಯದವರು ಕಿರುಕುಳ ನೀಡುತ್ತಿರುವ ಘಟನೆಯಿಂದ ಹೆದರಿರುವ 100ಕ್ಕೂ ಅಧಿಕ ಹಿಂದೂ ಕುಟುಂಬದವರು ಮೀರತ್‌ನಿಂದ ವಲಸೆ ಹೋಗುತ್ತಿದ್ದಾರೆ ಎಂಬ ವರದಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನಿರಾಕರಿಸಿದ್ದಾರೆ.

ಯಾರು ಕೂಡಾ ವಲಸೆ ಹೋಗುತ್ತಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ ಯಾರು ವಲಸೆ ಹೋಗುತ್ತಾರೆ. ಕೆಲವು ವೈಯಕ್ತಿಕ ಘಟನೆಗಳಿರಬಹುದು. ಆದರೆ ವಲಸೆ ಹೋಗುತ್ತಿಲ್ಲ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರವಾಗಿ ಹೇಳಿದರು.

ಅನ್ಯಕೋಮಿನ ಜನರು ಮಹಿಳೆಯರಿಗೆ ಕಿರುಕುಳ ನೀಡಿ ಮೀರತ್‌ನ ಪ್ರಹ್ಲಾದ್‌ನಗರ ಪಟ್ಟಣದಿಂದ ಹಿಂದೂ ಕುಟುಂಬಗಳನ್ನು ಊರು ಬಿಟ್ಟು ತೆರಳುವಂತೆ ಬಲವಂತಗೊಳಿಸುತ್ತಿದ್ದಾರೆ ಎಂದು ಭವೇಶ್ ಮೆಹ್ತಾ ಎಂಬ ಸ್ಥಳೀಯ ಬಿಜೆಪಿ ಮುಖಂಡ ಆರೋಪಿಸಿ, ನಮೋ ಆ್ಯಪ್ ಮೂಲಕ ಜೂನ್ 11ರಂದು ದೂರು ದಾಖಲಿಸಿದ್ದರು. ಹಿಂದೂ ಕುಟುಂಬಗಳು ತಮ್ಮ ಮನೆ, ಆಸ್ತಿ ಮಾರಿ ವಲಸೆ ಹೋಗುತ್ತಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ವಿರೋಧಿಸಿದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದವರು ದೂರಿದ್ದರು.

ಈ ಕುರಿತು ತನಿಖೆ ನಡೆಸುವಂತೆ ಆದಿತ್ಯನಾಥ್ ಸೂಚಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸಮಿತಿಯೊಂದನ್ನು ರಚಿಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಪ್ರಹ್ಲಾದ್ ನಗರದಲ್ಲಿ ಇಂತಹ ಘಟನೆ ನಡೆದಿಲ್ಲ. ಅಲ್ಲಿ ಜನರು ಮನೆ ಮಾರುತ್ತಿದ್ದಾರೆ ಎಂಬುದು ನಿಜ. ಆದರೆ ಇದು ಈ ವಾಡಿಕೆಯ ಪ್ರಕ್ರಿಯೆಯಾಗಿದೆ ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News