ಶಾರದಾ ಚಿಟ್ ಫಂಡ್ ಹಗರಣ: ರಾಜೀವ್ ಕುಮಾರ್ ಮಧ್ಯಂತರ ರಕ್ಷಣೆ ವಿಸ್ತರಣೆ

Update: 2019-07-02 14:59 GMT

ಕೋಲ್ಕತಾ, ಜು. 2: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಕೋಲ್ಕತಾ ಉಚ್ಚ ನ್ಯಾಯಾಲಯ ಜುಲೈ 22ರ ವರೆಗೆ ವಿಸ್ತರಿಸಿದೆ.

 ನ್ಯಾಯಮೂರ್ತಿ ಆಶಾ ಅರೋರಾ ಅವರ ಏಕಸದಸ್ಯ ಪೀಠ ಮುಖ್ಯ ದೂರಿನ ವಿಚಾರಣೆಯನ್ನು ಜುಲೈ 15ಕ್ಕೆ ಹಾಗೂ ಕೋಲ್ಕತಾದಿಂದ ಹೊರಗೆ ಪ್ರಯಾಣಿಸುವ ಕುರಿತ ಮಾರ್ಪಾಡು ಮನವಿಯ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಿದೆ.

ಬಹುಕೋಟಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ನೀಡಿದ ನೋಟಿಸನ್ನು ರುದ್ದುಗೊಳಿಸುವಂತೆ ಕೋರಿ ರಾಜೀವ್ ಕುಮಾರ್ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಬಂಧನದಿಂದ ರಕ್ಷಣೆ ವಿಸ್ತರಿಸುವಂತೆ ಕೋರಿ ಕುಮಾರ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋಲ್ಕತಾದ ಕೆಳ ನ್ಯಾಯಾಲಯ ತಿರಸ್ಕರಿಸಿತ್ತು ಹಾಗೂ ಸೂಕ್ತ ಪರಿಹಾರಕ್ಕೆ ಕೋಲ್ಕತಾ ಉಚ್ಚ ನ್ಯಾಯಾಲಯ ಅಥವಾ ಪಶ್ಚಿಮಬಂಗಾಳದ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಶಿಫಾರಸು ಮಾಡಿತ್ತು.

ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿದ್ದ ಪಶ್ಚಿಮಬಂಗಾಳ ಪೊಲೀಸ್‌ನ ಸಿಟ್ ತಂಡದ ನೇತೃತ್ವ ವಹಿಸಿದ್ದ ಕುಮಾರ್ ಸಾಕ್ಷ ನಾಶಗೊಳಿಸಿರುವ ಆರೋಪಕ್ಕೆ ಒಳಗಾಗಿದ್ದಾರೆ. ಫೆಬ್ರವರಿ 3ರಂದು ಸಿಬಿಐ ತಂಡ ಕುಮಾರ್ ಅವರ ಮನೆಯಲ್ಲಿ ಅವರನ್ನು ವಿಚಾರಣೆ ನಡೆಸಿದಾಗ ಅಭೂತಪೂರ್ವ ಘಟನೆಗಳ ವಿವರ ಬಹಿರಂಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News