ಮರ್ಯಾದೆಗೇಡು ಹತ್ಯೆ: ಪತಿ, 3 ತಿಂಗಳ ಗರ್ಭಿಣಿ ಪತ್ನಿಯ ಕೊಲೆ

Update: 2019-07-04 15:54 GMT

ತೂತುಕುಡಿ, ಜು.4: ಮರ್ಯಾದೆಗೇಡು ಹತ್ಯೆಯೆಂದು ಅನುಮಾನಿಸಲಾಗಿರುವ ಘಟನೆಯೊಂದರಲ್ಲಿ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿಯನ್ನು ಹತ್ಯೆಗೈಯ್ಯಲಾದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಂಪತಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ್ದರೂ ಇಬ್ಬರ ಜಾತಿ ಭಿನ್ನವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ತಂದೆ ಅಳಗರ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಕೊಲೆಗೀಡಾದ ಮಹಿಳೆ ಗರ್ಭಿಣಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಪ್ಪು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 24ರ ಹರೆಯದ ಸೊಲೈರಾಜ್ ಮತ್ತು ಎ.ಜ್ಯೋತಿ ಪರಸ್ಪರ ಪ್ರೀತಿಸುತ್ತಿದ್ದರು. ಸೊಲೈರಾಜ್ ಪರಯರ್ ಸಮುದಾಯಕ್ಕೆ ಸೇರಿದವರಾಗಿದ್ದರೆ ಜ್ಯೋತಿ ಪಲ್ಲರ್ ಸಮುದಾಯಕ್ಕೆ ಸೇರಿದ್ದರು. ಸೊಲೈರಾಜ್ ಬೇರೆ ಜಾತಿಗೆ ಸೇರಿದವನಾದ ಕಾರಣ ಜ್ಯೋತಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮೂರು ತಿಂಗಳ ಹಿಂದೆ ಸೊಲೈರಾಜ್ ಮನೆಯವರ ಒಪ್ಪಿಗೆಯೊಂದಿಗೆ ಅವರಿಬ್ಬರ ವಿವಾಹ ನಡೆದಿತ್ತು. ನಂತರ ಅವರು ಸೊಲೈರಾಜ್ ಕುಟುಂಬವರ್ಗ ಇದ್ದ ಪ್ರದೇಶದಲ್ಲೇ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೊಲೈರಾಜ್ ತಾಯಿ ಮುತ್ತುಮಾರಿ ಪೊಲೀಸರಿಗೆ ತಿಳಿಸಿರುವಂತೆ, ಜುಲೈ3ರಂದು ಬೆಳಿಗ್ಗೆ ಆರು ಗಂಟೆಗೆ ಗಂಡ ಹೆಂಡತಿ ಇನ್ನೂ ಎದ್ದೇಳದಿರುವುದನ್ನು ಕಂಡು ಆಕೆ ಮನೆಯ ಒಳಗೆ ಪ್ರವೇಶಿಸಿದ್ದರು. ಮನೆಯೊಳಗೆ ಸೊಲೈರಾಜ್ ಮತ್ತು ಜ್ಯೋತಿಯ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಬುಧವಾರ ಮುಂಜಾನೆ ದುಷ್ಕರ್ಮಿಗಳ ಗುಂಪು ದಂಪತಿ ಗಾಢ ನಿದ್ದೆಯಲ್ಲಿರುವಾಗ ಮನೆಯೊಳಗೆ ಪ್ರವೇಶಿಸಿ ಅವರನ್ನು ಹತ್ಯೆಗೈದು ಪರಾರಿಯಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ತೂತುಕುಡಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.

ಸೊಲೈರಾಜ್ ಮತ್ತು ಜ್ಯೋತಿಗೆ ಆಕೆಯ ಕುಟುಂಬವರ್ಗದವರಿಂದ ಬೆದರಿಕೆಯಿತ್ತು. ಅವರು ಹಲವು ಬಾರಿ ಇಲ್ಲಿಗೆ ಬಂದು ಹಿಂಸಾಚಾರ ನಡೆಸುವ ಬೆದರಿಕೆ ಹಾಕಿದ್ದರು. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೆವು. ನಂತರ ಅವರ ಉಪಟಳ ಕಡಿಮೆಯಾಗಿತ್ತು. ಆದರೆ ಈಗ ಇಬ್ಬರನ್ನು ಈ ರೀತಿ ಹತ್ಯೆ ಮಾಡಲಾಗಿದೆ ಎಂದು ಸೊಲೈರಾಜ್ ಚಿಕ್ಕಮ್ಮ ಕರ್ಪಗಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News