ಕೇಂದ್ರ ಸರಕಾರ ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸಿಲ್ಲ: ಊರ್ಜಿತ್ ಪಟೇಲ್

Update: 2019-07-04 16:02 GMT

ಹೊಸದಿಲ್ಲಿ, ಜು.4: ಕೇಂದ್ರ ಸರಕಾರ ದೇಶದ ಆರ್ಥಿಕ ಆರೋಗ್ಯದ ವಿಷಯದಲ್ಲಿ ತನ್ನ ಪ್ರಧಾನ ವ್ಯವಸ್ಥಾಪಕ ಪಾತ್ರವನ್ನು ಸರಿಯಾಗಿ ನಿಭಾಯಿಸಿಲ್ಲ ಮತ್ತು ಭಾರತೀಯ ಬ್ಯಾಂಕ್‌ಗಳು ಮಿತಿಗಿಂತ ಅಧಿಕ ಸಾಲ ನೀಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.

ಆರ್‌ಬಿಐ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿ ನೀಡಿದ ಸಾರ್ವಜನಿಕ ಹೇಳಿಕೆಯಲ್ಲಿ, ಪಟೇಲ್, ಸರಕಾರ ಮತ್ತು ಬ್ಯಾಂಕ್‌ಗಳ ಈ ಧೋರಣೆ ಸದ್ಯದ ಕೆಟ್ಟ ಸಾಲಗಳ ಸಮಸ್ಯೆಯನ್ನು ಮತ್ತು ಅದರ ಫಲವಾಗಿ ಬಂಡವಾಳ ಕುಂಠಿತ ಉಂಟಾಗಿದೆ ಎಂದು ತಿಳಿಸಿದ್ದಾರೆ. ಸ್ಟಾಂಡ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಜೂನ್ 3ರಂದು ನಡೆದ ಭಾರತೀಯ ಆರ್ಥಿಕ ನೀತಿಯ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಬ್ಯಾಂಕ್ ‌ಗಳು ಸಮತೋಲಿತ ಸಾಲ ನೀಡುವಿಕೆ ಪ್ರಗತಿಯನ್ನು ಕಾಪಾಡಲು ವಿಫಲವಾಗಿವೆ ಮತ್ತು ಕೆಟ್ಟ ಆಸ್ತಿಗಳಿಂದ ಉತ್ತಮ ಆಸ್ತಿಗಳನ್ನು ಪ್ರತ್ಯೇಕಿಸುವಲ್ಲಿ ಅವುಗಳು ಅತಿಕಡಿಮೆ ಅಪಾಯ ವಿಶ್ಲೇಷಣೆ ಮತ್ತು ನಿರ್ವಹಣೆಯನ್ನು ಅನ್ವಯಿಸಿವೆ. ತ್ವರಿತ ಹಿಂಪಡೆಯುವಿಕೆ ಅಥವಾ ನಷ್ಟವನ್ನು ಕಡಿತಗೊಳಿಸುವಲ್ಲಿ ನಿಯಂತ್ರಕರು ವಿಫಲವಾಗಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ. ಸರಕಾರಕ್ಕೆ ಹೆಚ್ಚಿನ ಲಾಭ ದೊರೆಯುತ್ತಿದ್ದ ಕಾರಣ ಅದು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ದೇಶದ ಪ್ರಮುಖ ಮೂರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಭಾರತೀಯ ಸೆಂಟ್ರಲ್ ಬ್ಯಾಂಕ್‌ಗೆ 2019-20 ವಿತ್ತೀಯ ವರ್ಷದಲ್ಲಿ 250 ಬಿಲಿಯನ್ ರೂ.ಗೂ ಅಧಿಕ ಬಂಡವಾಳ ಹೂರಣದ ಅಗತ್ಯವಿದೆ. ಈ ಪರಿಸ್ಥಿತಿಗೆ ಬ್ಯಾಂಕ್‌ಗಳು, ನಿಯಂತ್ರಕರು ಮತ್ತು ಸರಕಾರವೇ ಹೊಣೆ ಎಂದು ಪಟೇಲ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News