ಗೃಹಸಾಲ: ಮಧ್ಯಮ ವರ್ಗದ ಜನರಿಗೆ ಬಜೆಟ್ ಕೊಡುಗೆ ಹೀಗಿದೆ….
ಹೊಸದಿಲ್ಲಿ,ಜು.5: ಶುಕ್ರವಾರ ಸಂಸತ್ತಿನಲ್ಲಿ ತನ್ನ ಚೊಚ್ಚಲ ಬಜೆಟ್ ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಗ್ಗದ ವಸತಿ ಯೋಜನೆಗೆ ಉತ್ತೇಜನ ನೀಡಲು ಗೃಹಸಾಲದ ಮೇಲಿನ ಬಡ್ಡಿಗೆ ತೆರಿಗೆ ಕಡಿತ ಮಿತಿಯನ್ನು ಈಗಿನ 2 ಲ.ರೂ.ಗಳಿಂದ 3.5 ಲ.ರೂ.ಗೇರಿಸುವ ಮೂಲಕ ಮಧ್ಯಮ ವರ್ಗದವರಿಗೆ ಕೊಡುಗೆಯನ್ನು ನೀಡಿದ್ದಾರೆ. 45 ಲ.ರೂ.ವರೆಗಿನ ಮೌಲ್ಯದ ಮೊದಲ ಮನೆಯ ಖರೀದಿಗಾಗಿ ಹಾಲಿ ಹಣಕಾಸು ವರ್ಷದಲ್ಲಿ (2020,ಮಾ.31ರೊಳಗೆ) ಮಂಜೂರಾದ ಗೃಹಸಾಲಗಳಿಗೆ ಈ ಕೊಡುಗೆಯು ಅನ್ವಯಿಸಲಿದೆ.
ಸರಕಾರವು ಬಾಡಿಗೆ ವಸತಿಗಳನ್ನು ಉತ್ತೇಜಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ ಮತ್ತು ರಾಜ್ಯಗಳಿಗಾಗಿ ಆಧುನಿಕ ಬಾಡಿಗೆ ಕಾಯ್ದೆಯನ್ನು ಅಂತಿಮಗೊಳಿಸಲಿದೆ ಎಂದು ಸಚಿವೆ ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ(ಪಿಎಂಎವೈ-ಜಿ)ದ ಅಡಿ 2021-22ರವರೆಗೆ ಅರ್ಹ ಫಲಾನುಭವಿಗಳಿಗೆ 1.95 ಕೋಟಿ ಮನೆಗಳನ್ನು ಒದಗಿಸಲಾಗುವುದು. ಗೃಹಸಾಲ ಕಂಪನಿಗಳನ್ನು ಇನ್ನು ಮುಂದೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್(ಎನ್‌ಎಚ್‌ಬಿ)ನ ಬದಲಾಗಿ ಆರ್‌ಬಿಐ ನಿಯಂತ್ರಿಸಲಿದೆ ಎಂದರು.
ಆದಾಯ ತೆರಿಗೆ ಮತ್ತು ಜಿಎಸ್‌ಟಿ ಕಾಯ್ದೆಗಳಡಿ ಅಗ್ಗದ ವಸತಿಯನ್ನು ವ್ಯಾಖ್ಯಾನಿಸಲು ಕಾರ್ಪೆಟ್ ಏರಿಯಾ ಮಿತಿಯನ್ನು ಮಹಾನಗರ ಪ್ರದೇಶಗಳಲ್ಲಿ 30 ಚ.ಮೀ.ನಿಂದ 60 ಚ.ಮೀ.ಗೆ ಮತ್ತು ಮಹಾನಗರೇತರ ಪ್ರದೇಶಗಳಲ್ಲಿ 60 ಚ.ಮೀ.ನಿಂದ 90 ಚ.ಮೀ.ಗೆ ಹೆಚ್ಚಿಸುವುದನ್ನು ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು. ಅಗ್ಗದ ವಸತಿಯ ಬೆಲೆಯನ್ನು ಗರಿಷ್ಠ 45 ಲ.ರೂ.ಗೆ ನಿಗದಿಗೊಳಿಸಲಾಗಿದೆ.
ಗೃಹಸಾಲದ ಮೇಲಿನ ಬಡ್ಡಿಗೆ ತೆರಿಗೆ ಕಡಿತ ಮಿತಿಯನ್ನು 3.5 ಲ.ರೂ.ಗೆ ಹೆಚ್ಚಿಸಿರುವುದರಿಂದ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಸಾಲ ಮರುಪಾವತಿಯ 15 ವರ್ಷಗಳ ಅವಧಿಯಲ್ಲಿ ಸುಮಾರು ಏಳು ಲ.ರೂ.ಗಳ ಲಾಭ ದೊರೆಯಲಿದೆ ಎಂದು ಸೀತಾರಾಮನ್ ತಿಳಿಸಿದರು. ಈ ಕೊಡುಗೆಯು ಹಾಲಿ ಹಣಕಾಸು ವರ್ಷದಲ್ಲಿ ಮಂಜೂರಾದ ಸಾಲಗಳಿಗೆ ಮಾತ್ರ ಅನ್ವಯಿಸಲಿದೆ ಮತ್ತು ಖರೀದಿದಾರ ಸಾಲ ಮಂಜೂರು ದಿನಾಂಕದಂದು ತನ್ನ ಹೆಸರಿನಲ್ಲಿ ಬೇರೆ ಯಾವುದೇ ಮನೆಯನ್ನು ಹೊಂದಿರಬಾರದು.
‘ಕೈಗೆಟಕುವ ಬೆಲೆಗಳಲ್ಲಿ ಸರ್ವರಿಗೂ ಮನೆ’ ಗುರಿಯನ್ನು ಸಾಧಿಸಲು ಅಗ್ಗದ ವಸತಿ ಯೋಜನೆಗಳ ಮೇಲೆ ಡೆವಲಪರ್‌ಗಳ ಲಾಭಾಂಶಗಳ ಮೇಲೆ ಈಗಾಗಲೇ ತೆರಿಗೆ ರಜೆಯನ್ನು ಒದಗಿಸಲಾಗಿದೆ ಎಂದ ಸೀತಾರಾಮನ್ ಅವರು,ಬಾಡಿಗೆ ವಸತಿಗಳನ್ನು ಉತ್ತೇಜಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದರು.
ಪಿಎಂಎವೈ-ಜಿ 2022ರೊಳಗೆ ‘ಸರ್ವರಿಗೂ ಮನೆ’ ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಒಟ್ಟು 1.54 ಕೋ.ಗ್ರಾಮೀಣ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಯೋಜನೆಯ ಎರಡನೇ ಹಂತದಲ್ಲಿ 2019-20 ರಿಂದ 2021-22ರವರೆಗಿನ ಅವಧಿಯಲ್ಲಿ 1.95 ಕೋ.ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಉದ್ದೇಶಿಸಲಾಗಿದೆ. ಈ ಮನೆಗಳು ಶೌಚಾಲಯ,ವಿದ್ಯುತ್ ಮತ್ತು ಎಲ್‌ಪಿಜಿ ಸಂಪರ್ಕಗಳಂತಹ ಸೌಕರ್ಯಗಳನ್ನು ಹೊಂದಿರುತ್ತವೆ. ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ 2015-16ರಲ್ಲಿ 314 ದಿನಗಳಿದ್ದ ಮನೆಗಳ ನಿರ್ಮಾಣದ ಸರಾಸರಿ ಅವಧಿಯು 2017-18ರಲ್ಲಿ 114 ದಿನಗಳಿಗೆ ಇಳಿದಿದೆ ಎಂದರು.