ಬಜೆಟ್ 2019-20: ವಿದೇಶಿ ಹೂಡಿಕೆದಾರರು, ಉನ್ನತ ಸರಕಾರಿ ಸಂಸ್ಥೆಗಳಿಗೆ ಸರಳ ಕೆವೈಸಿ ನಿಯಮ
ಹೊಸದಿಲ್ಲಿ, ಜು.5: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕೆವೈಸಿ (ನೋ ಯುವರ್ ಕಸ್ಟಮರ್) ನಿಯಮವನ್ನು ಸರಳಗೊಳಿಸಿದ್ದಾರೆ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಭಾಗೀದಾರಿಕೆಯನ್ನು ಹೆಚ್ಚಿಸಲು ಸಾಮಾಜಿಕ ಉದ್ದಿಮೆಗಳು ಹಾಗೂ ಸ್ವಯಂ ಸಂಘಟನೆಗಳು ಅವಕಾಶ ನೀಡಿದ್ದಾರೆ.
ತನ್ನ ಚೊಚ್ಚಲ ಬಜೆಟ್ ಮಂಡಿಸಿದ ಸೀತಾರಾಮನ್, ಬಂಡವಾಳ ಮಾರುಕಟ್ಟೆಯನ್ನು ಜನರ ಸಮೀಪಕ್ಕೆ ತರುವ ಅಗತ್ಯವಿದೆ. ಅದಕ್ಕಾಗಿ ಕನಿಷ್ಠ ಸಾರ್ವಜನಿಕ ಶೇರುಗಳ ಪಾಲನ್ನು 25 ಶೇಕಡದಿಂದ 35ಕ್ಕೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಭದ್ರತೆ ಮತ್ತು ವರ್ಗಾವಣೆ ಮಂಡಳಿ (ಸೆಬಿ) ಜೊತೆ ಸಮಾಲೋಚನೆ ನಡೆಸಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾಲ ಭದ್ರತೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ತಮ್ಮ ಹೂಡಿಕೆಯನ್ನು ದೇಶೀಯ ಹೂಡಿಕೆದಾರರಿಗೆ ಮಾರಲು ಮತ್ತು ವರ್ಗಾವಣೆ ಮಾಡಲು ಅವಕಾಶ ನೀಡಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಸೌಹಾರ್ದಯುತ ಮತ್ತು ಗೊಂದಲಮುಕ್ತ ಹೂಡಿಕೆಯ ವಾತಾವರಣ ಒದಗಿಸುವ ಅಗತ್ಯವಿದೆ ಮತ್ತು ಕೆವೈಸಿ ನಿಯಮಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆಸ್ನೇಹಿಗೊಳಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.