ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸಲು ಚಿಂತನೆ

Update: 2019-07-05 15:11 GMT

  ಹೊಸದಿಲ್ಲಿ, ಜು.5: ಮಾಧ್ಯಮ, ವಾಯುಯಾನ, ವಿಮೆ ಮತ್ತು ಸಿಂಗಲ್ ಬ್ರಾಂಡ್ ರಿಟೇಲ್ ವಲಯ ಸಹಿತ ಹಲವು ಕ್ಷೇತ್ರಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಚಿಂತಿಸಲಾಗಿದೆ . ಇದು ದೇಶಕ್ಕೆ ಅಧಿಕ ವಿದೇಶಿ ಬಂಡವಾಳ ಆಕರ್ಷಿಸುವ ಪ್ರಯತ್ನವಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

  ವಿದೇಶಿ ನೇರ ಬಂಡವಾಳ ಹೂಡಿಕೆದಾರರನ್ನು ಭಾರತದತ್ತ ಆಕರ್ಷಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ವಾಯುಯಾನ, ಮಾಧ್ಯಮ(ಎನಿಮೇಷನ್, ವಿಷುವಲ್ ಎಫೆಕ್ಟ್, ಗೇಮ್‌ಗಳು ಮತ್ತು ಕಾಮಿಕ್ಸ್‌ಗಳು) ಹಾಗೂ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಪ್ರಸ್ತಾವದ ಬಗ್ಗೆ ಸಂಬಂಧಿಸಿದವರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬರಲಾಗುವುದು.

 ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗುವುದು. 2018-19ರ ನಡುವಿನ ಅವಧಿಯಲ್ಲಿ ಭಾರತದ ವಿದೇಶಿ ನೇರ ಹೂಡಿಕೆಯ ಒಳಹರಿವು ಶೇ.6ರಷ್ಟು ಹೆಚ್ಚಿದ್ದು, 4.4 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಸಚಿವೆ ಹೇಳಿದ್ದಾರೆ.

 2015ರ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದ ಬಳಿಕ ಕೇಂದ್ರ ಸರಕಾರ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಸಡಿಲಗೊಳಿಸಿದ್ದು, ಸುದ್ದಿವಾಹಿನಿ ಹಾಗೂ ಎಫ್‌ಎಂ ರೇಡಿಯೋಗಳಲ್ಲಿ ವಿದೇಶಿ ಬಂಡವಾಳ ಮಿತಿ ಶೇ.26ರಿಂದ ಶೇ.49ಕ್ಕೆ ಹೆಚ್ಚಿತ್ತು. ಅಲ್ಲದೆ ಮನರಂಜನೆ ವಾಹಿನಿಗಳಲ್ಲಿ ಶೇ.100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಮುದ್ರಣ ಮಾಧ್ಯಮದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.26ರಲ್ಲೇ ಉಳಿಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿತ್ತು.

    ಹಾಲಿ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ 3 ಟ್ರಿಲಿಯನ್ ಡಾಲರ್ ಆಗಲಿದ್ದು, 2024ರ ವೇಳೆಗೆ ಅರ್ಥವ್ಯವಸ್ಥೆಯನ್ನು ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ತಲುಪಲು ರಚನಾತ್ಮಕ ಸುಧಾರಣೆಯ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News