ಭಾರತವು 3 ಲಕ್ಷ ಕೋಟಿ ಡಾ.ಗಳ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತಾರಾಮನ್

Update: 2019-07-05 15:15 GMT

ಹೊಸದಿಲ್ಲಿ,ಜು.5: ಭಾರತವು ಪ್ರಸಕ್ತ ವಿತ್ತವರ್ಷದಲ್ಲಿ ಮೂರು ಲಕ್ಷ ಕೋಟಿ ಡಾ.ಗಳ ಆರ್ಥಿಕತೆಯಾಗಲು ಸಜ್ಜಾಗಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂ.ಗಳ ಆರ್ಥಿಕತೆಯಾಗಲು ರಚನಾತ್ಮಕ ಸುಧಾರಣೆಗಳು ಅಗತ್ಯವಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತನ್ನ ಮುಂಗಡಪತ್ರ ಭಾಷಣದಲ್ಲಿ ಹೇಳಿದ್ದಾರೆ.

ಐದು ವರ್ಷಗಳ ಹಿಂದೆ 1.85 ಲ.ಕೋ.ಡಾ.ಗಳಷ್ಟಿದ್ದ ಭಾರತೀಯ ಆರ್ಥಿಕತೆಯು ಈಗ 2.7 ಲ.ಕೋ.ಡಾ.ಗೆ ತಲುಪಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಐದು ಲ.ಕೋ.ಡಾ.ಗಳಿಗೆ ತಲುಪಲು ಸಮರ್ಥವಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ಆರ್ಥಿಕತೆಯು ಈಗ ವಿಶ್ವದಲ್ಲಿಯೇ ಆರನೆಯ ಅತಿ ದೊಡ್ಡ ಆರ್ಥಿಕತೆಯಾಗಿದೆ. ಐದು ವರ್ಷಗಳ ಹಿಂದೆ ಅದು 11ನೇ ಸ್ಥಾನದಲ್ಲಿತ್ತು. ಖರೀದಿ ಸಾಮರ್ಥ್ಯ ಸಮಾನತೆಯಲ್ಲಿ ಹೇಳುವುದಾದರೆ ನಾವು ಈಗಾಗಲೇ ಚೀನಾ ಮತ್ತು ಅಮೆರಿಕದ ಬಳಿಕ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದರು.

ಸರಕಾರವು ಕಳೆದ ಐದು ವರ್ಷಗಳಲ್ಲಿ,ವಿಶೇಷವಾಗಿ ಪರೋಕ್ಷ ತೆರಿಗೆ,ದಿವಾಳಿತನ ಮತ್ತು ರಿಯಲ್ ಎಸ್ಟೇಟ್‌ಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಸುಧಾರಣೆಗಳನ್ನು ತಂದಿದೆ. ಇದೇ ವೇಳೆ ಜನಸಾಮಾನ್ಯರ ಜೀವನವನ್ನು ಬದಲಾಯಿಸಲು ಮುದ್ರಾ ಸಾಲ,ಉಚಿತ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ,ಮಹಿಳೆಯರ ಘನತೆಯನ್ನು ಗೌರವಿಸಿ ಮನೆಗಳಲ್ಲಿ ಶೌಚಾಲಯದಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದ ಸೀತಾರಾಮನ್,ಇದನ್ನು ಮುಂದುವರಿಸಲು ಮೂಲಸೌಕರ್ಯ,ಡಿಜಿಟಲ್ ಆರ್ಥಿಕತೆ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗಾಗಿ ನಾವು ಭಾರೀ ಹೂಡಿಕೆಯನ್ನು ಮಾಡಬೇಕಿದೆ ಎಂದರು.

ಭಾರತೀಯ ಆರ್ಥಿಕತೆಯು ಒಂದು ಲ.ಕೋ.ಡಾ.ಗಳನ್ನು ತಲುಪಲು 55 ವರ್ಷಗಳು ಬೇಕಾಗಿದ್ದವು. ಆದರೆ ದೇಶದ ಮತ್ತು ಅದರ ಪ್ರಜೆಗಳ ಹೃದಯಗಳು ಆಶೆ,ವಿಶ್ವಾಸ ಮತ್ತು ಆಕಾಂಕ್ಷೆಗಳಿಂದ ತುಂಬಿದ್ದಾಗ ನಾವು ಐದು ವರ್ಷಗಳಲ್ಲಿ ಒಂದು ಲ.ಕೋ.ಡಾ.ಗಳನ್ನು ಸೇರಿಸಿದ್ದೇವೆ. ನಮ್ಮ ಆರ್ಥಿಕತೆ ಇಂದು ಮೂರು ಲ.ಕೋ.ರೂ.ಗಳ ಮಟ್ಟವನ್ನು ಸಮೀಪಿಸುತ್ತಿದೆ ಎಂದ ಅವರು,ಸಣ್ಣ,ಮಧ್ಯಮ ಅಥವಾ ಬೃಹತ್ ಕೈಗಾರಿಕೆಯಾಗಿರಲಿ...ಭಾರತದ ಖಾಸಗಿ ಕ್ಷೇತ್ರದಲ್ಲಿಯ ಉದ್ಯಮಗಳು ಆರ್ಥಿಕತೆಯ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News