ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಖ್ಯಾತ ಪಾಕ್ ಕ್ರಿಕೆಟಿಗ

Update: 2019-07-06 03:58 GMT

ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ ಬೆನ್ನಲ್ಲೇ ಖ್ಯಾತ ಆಲ್‌ರೌಂಡರ್ ಶೋಯಿಬ್ ಮಲಿಕ್ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 94 ರನ್‌ಗಳ ಜಯ ಸಾಧಿಸಿದರೂ, ಸೆಮಿಫೈನಲ್ ಹಂತಕ್ಕೇರಲು ವಿಫಲವಾಗಿತ್ತು. ಪಂದ್ಯ ಮುಗಿದ ತಕ್ಷಣ ಮಲಿಕ್ ತಮ್ಮ ನಿವೃತ್ತಿ ನಿರ್ಧಾರದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

"ಇಂದು ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ನನ್ನೊಂದಿಗೆ ಆಡಿದ ಎಲ್ಲ ಆಟಗಾರರಿಗೆ, ನನಗೆ ತರಬೇತಿ ನೀಡಿದ ಕೋಚ್‌ಗಳಿಗೆ, ಕುಟುಂಬ, ಸ್ನೇಹಿತರು, ಮಾಧ್ಯಮ ಮತ್ತು ಪ್ರಾಯೋಜಕರಿಗೆ ಕೃತಜ್ಞತೆಗಳು. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಅಭಿಮಾನಿಗಳು; ನಾನು ಅವರನ್ನು ಪ್ರೀತಿಸುತ್ತೇನೆ" ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ. ಐಸಿಸಿ ವಿಶ್ವಕಪ್‌ನ ಟ್ವಿಟ್ಟರ್ ಹ್ಯಾಂಡಲ್ ಕೂಡಾ, ಈ ಹಿರಿಯ ಆಟಗಾರನಿಗೆ ಸಹ ಆಟಗಾರರು ಗೌರವರಕ್ಷೆ ನೀಡುತ್ತಿರುವ ವೀಡಿಯೊ ಶೇರ್ ಮಾಡಿದೆ.

37 ವರ್ಷದ ಈ ಕ್ರಿಕೆಟಿಗ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಭಾರತ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ 89 ರನ್‌ಗಳ ಸೋಲು ಕಂಡಿತ್ತು. 287 ಏಕದಿನ ಪಂದ್ಯಗಳನ್ನು ಆಡಿರುವ ಮಲಿಕ್ 34.55 ಸರಾಸರಿಯಲ್ಲಿ 7534 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂಬತ್ತು ಶತಕ ಹಾಗೂ 44 ಅರ್ಧಶತಕಗಳು ಸೇರಿವೆ. 158 ವಿಕೆಟ್ ಕಿತ್ತಿರುವ ಅವರ ಅತ್ಯುತ್ತಮ ಬೌಲಿಂಗ್ ಸಾಧನೆ 19 ರನ್‌ಗಳಿಗೆ 4 ವಿಕೆಟ್ ಕಬಳಿಸಿರುವುದು.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಸಹ ಆಟಗಾರರು ಮತ್ತು ಅಭಿಮಾನಿಗಳು ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News