ಮಾನನಷ್ಟ ಮೊಕದ್ದಮೆ: ರಾಹುಲ್‌ಗೆ ಜಾಮೀನು

Update: 2019-07-06 14:45 GMT

ಪಾಟ್ನ, ಜು.6: ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು ದೊರಕಿದೆ.

“ಲಲಿತ್ ಮೋದಿಯಾಗಿರಲಿ, ನೀರವ್ ಮೋದಿಯಾಗಿರಲಿ… ಎಲ್ಲಾ ಕಳ್ಳರ ಉಪನಾಮ ಮೋದಿ ಎಂದೇ ಯಾಕೆ ಇರುತ್ತದೆ” ಎಂದು ರಾಹುಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೋದಿ ಉಪನಾಮ ಹೊಂದಿರುವ ಎಲ್ಲಾ ವ್ಯಕ್ತಿಗಳ ಭಾವನೆಗೆ ಘಾಸಿ ಎಸಗಿದೆ ಎಂದು 2019ರ ಎಪ್ರಿಲ್‌ನಲ್ಲಿ ಸುಶೀಲ್ ಕುಮಾರ್ ಮೋದಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಶನಿವಾರ ನ್ಯಾಯಾಲಯದಲ್ಲಿ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ತನಗೆ ಕಿರುಕುಳ ನೀಡಲು ಮತ್ತು ಬೆದರಿಸುವ ಉದ್ದೇಶದಿಂದ ಆರೆಸ್ಸೆಸ್- ಬಿಜೆಪಿಯಲ್ಲಿರುವ ರಾಜಕೀಯ ವಿರೋಧಿಗಳು ದಾಖಲಿಸಿರುವ ಪ್ರಕರಣದ ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ಬಂದಿರುವುದಾಗಿ ಹೇಳಿದ್ದರು. ಮೋದಿ ಸರಕಾರ ಅಥವಾ ಆರೆಸ್ಸೆಸ್-ಬಿಜೆಪಿಯ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಈ ಮಧ್ಯೆ, ಶುಕ್ರವಾರ ಮುಂಬೈ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಆರೆಸ್ಸೆಸ್ ಕಾರ್ಯಕರ್ತ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News