ವಿಕಲಚೇತನ ಮಕ್ಕಳಿಗೆ ಮರೀಚಿಕೆಯಾದ ಶಾಲಾ ಶಿಕ್ಷಣ

Update: 2019-07-06 18:23 GMT

►ಯುನೆಸ್ಕೊ-ಟಿಐಎಸ್‌ಸಿ ವರದಿ ಬಹಿರಂಗ

 ಹೊಸದಿಲ್ಲಿ,ಜು.7: ಭಾರತದಲ್ಲಿ 5ರಿಂದ 19ರ ವಯೋಮಾನದೊಳಗಿನ ಪ್ರತಿ ನಾಲ್ಕು ಮಂದಿ ಭಿನ್ನಸಾಮರ್ಥ್ಯದ ಮಕ್ಕಳ ಪೈಕಿ ಒಂದಕ್ಕಿಂತಲೂ ಹೆಚ್ಚು ಮಕ್ಕಳು ಶಾಲಾ ಶಿಕ್ಷಣವನ್ನು ಪಡೆಯುತ್ತಿಲ್ಲವೆಂಬ ಕಳವಳಕಾರಿ ಅಂಶ ಈಗ ಬೆಳಕಿಗೆ ಬಂದಿದೆ.

  ವಿಶ್ವಸಂಸ್ಥೆಯ ಯುನೆಸ್ಕೊ ಹಾಗೂ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ (ಟಿಐಎಸ್‌ಸಿ) ಜುಲೈ 3ರಂದು ಬಿಡುಗಡೆಗೊಳಿಸಿರುವ ಅಂಗವಿಕಲ ಮಕ್ಕಳ ಕುರಿತಾದ 2019ರ ಭಾರತೀಯ ಶೈಕ್ಷಣಿಕ ಸ್ಥಿತಿ ವರದಿಯಲ್ಲಿ ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಅಂಗವೈಕಲ್ಯವನ್ನು ಹೊಂದಿರುವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿ ದೇಶವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ವರದಿಯು ಪಟ್ಟಿ ಮಾಡಿದೆ. ವಿಕಲಾಂಗ ಮಕ್ಕಳ ಶಿಕ್ಷಣದ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅದು ಹಲವಾರು ಶಿಫಾರಸುಗಳನ್ನು ಮಾಡಿದೆ..

 ಭಾರತದಲ್ಲಿ ಐದು ವರ್ಷ ವಯಸ್ಸಿನ ಶೇ.75ರಷ್ಟು ಭಿನ್ನಸಾಮರ್ಥ್ಯದ ಮಕ್ಕಳು ಯಾವುದೇ ಶಿಕ್ಷಣ ಸಂಸ್ಥೆಗೆ ಹಾಜರಾಗುತ್ತಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ ದೃಷ್ಟಿ ಹಾಗೂ ಶ್ರವಣ ಮಾಂಧ್ಯತೆ ಹೊಂದಿರುವ ಶಾಲೆಗಳ ಮೆಟ್ಟಲು ಹತ್ತುವುದು ತೀರಾ ವಿರಳವೆಂದು ವರದಿ ಹೇಳಿದೆ. ಶಾಲೆಗೆ ಹಾಜರಾಗುವ ಬಹುವಿಧದ ಅಂಗವೈಕಲ್ಯ, ಮಾನಸಿಕ ಅಸ್ವಸ್ಥತೆ ಹಾಗೂ ಮನೋವಿಕಲತೆಯುಳ್ಳ ಮಕ್ಕಳ ಶೇಕಡವಾರು ಪ್ರಮಾಣ ತೀರಾ ಕಡಿಮೆಯೆಂದು ವರದಿ ಬೆಟ್ಟು ಮಾಡಿ ತೋರಿಸಿದೆ. ಇಂತಹ ಮಕ್ಕಳಲ್ಲಿ ಶೇ.50ರಷ್ಟು ಮಂದಿ ಶಾಲೆಗೆ ಹಾಜರಾಗಿಯೇ ಇಲ್ಲವೆಂದು ಅದು ಹೇಳಿದೆ.

  ಭಿನ್ನಸಾಮರ್ಥ್ಯದ ಮಕ್ಕಳ ಶಾಲಾ ಹಾಜರಾತಿಯಲ್ಲೂ ಲಿಂಗವು ಪ್ರಮುಖ ಪಾತ್ರ ವಹಿಸಿದೆಯೆಂಬ ಅಂಶವೂ ಬೆಳಕಿಗೆ ಬಂದಿದೆ. ಶಾಲಾ ಶಿಕ್ಷಣವನ್ನು ಪಡೆಯುವ ಭಿನ್ನಸಾಮರ್ಥ್ಯದ ಮಕ್ಕಳಲ್ಲಿ ಹುಡುಗಿಯರಿಗಿಂತ ಹುಡುಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಬಹುತೇಕ ಅಂಗವಿಲ ಮಕ್ಕಳು ನಿಯಮಿತ ಶಾಲೆಗಳಿಗೆ ತೆರಳುತ್ತಿಲ್ಲ. ಬದಲಾಗಿ ಅವರು ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದಾಗ್ಯೂ, 2009ರಿಂದ 2015ರ ನಡುವಿನ ಅವಧಿಯಲ್ಲಿ ಶಾಲಾ ಶಿಕ್ಷಣ ಪಡೆಯುತ್ತಿರುವ ಭಿನ್ನಸಾಮರ್ಥ್ಯದ ಮಕ್ಕಳ ಪ್ರಮಾಣದಲ್ಲಿ ಇಳಿಕೆಯುಂಟಾಗಿದೆಯೆಂದು ವರದಿಯು ತಿಳಿಸಿದೆ.

   ಹೆಚ್ಚಿನ ಸಂಖ್ಯೆಯಲ್ಲಿ ಭಿನ್ನಸಾಮರ್ಥ್ಯದ ಮಕ್ಕಳು ಶಾಲಾ ಶಿಕ್ಷಣವನ್ನು ಪಡೆಯುವಂತೆ ಮಾಡಲು ವರದಿಯು ಹಲವಾರು ಶಿಫಾರಸುಗಳನ್ನು ಮುಂದಿಟ್ಟಿದೆ. ಮಕ್ಕಳ ಮುಕ್ತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಗೆ ತಿದ್ದುಪಡಿ (ಆರ್‌ಟಿಇ)ಗೆ ಬದಲಾವಣೆ ಮಾಡಿ, ಅದನ್ನು 2016ರ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಸಮನ್ವಯಗೊಳಿಸುವಂತೆ ವರದಿ ಸಲಹೆ ನೀಡಿದೆ. ಪ್ರತಿಯೊಂದು ಭಿನ್ನಸಾಮರ್ಥ್ಯದ ಮಗುವು ಶಾಲಾ ಶಿಕ್ಷಣವನ್ನು ಪಡೆಯುವಂತೆ ಮಾಡಲು ದೇಶದ ಶಿಕ್ಷಣ ವ್ಯವಸ್ಥೆಯ ಸಂರಚನೆ,ನಿಧಿ ನೀಡಿಕೆ ಹಾಗೂ ಪ್ರವೃತ್ತಿಯಲ್ಲಿ ಬದಲಾವಣೆಯಾಗಬೇಕೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News