ಗುಜರಾತ್ ಸರಕಾರದ ಕಳಪೆ ಯೋಜನೆ ಬಗ್ಗೆ ವರದಿ: ಪತ್ರಕರ್ತ, ಕುಟುಂಬಸ್ಥರಿಗೆ ಥಳಿತ

Update: 2019-07-08 16:19 GMT

ಗಾಂಧೀನಗರ, ಜು.8: ಸರಕಾರದ ಯೋಜನೆಯ ಕಳಪೆ ಅನುಷ್ಟಾನದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಸಿಟ್ಟಿನಲ್ಲಿ ಪತ್ರಕರ್ತ ಹಾಗೂ ಆತನ ಕುಟುಂಬದ ಸದಸ್ಯರನ್ನು ಥಳಿಸಿದ ಘಟನೆ ಗುಜರಾತಿನಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಧರ್ಮೇಶ್ ಪಟೇಲ್ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗುಜರಾತ್ ಮಿತ್ರ ಎಂಬ ದಿನಪತ್ರಿಕೆಯ ಸಿಟಿ ಬ್ಯೂರೋ ಚೀಫ್ ಆಗಿರುವ 34 ವರ್ಷದ ಹರ್ಷದ್ ಆಹಿರ್, ಆತನ ಪತ್ನಿ ಕೇತನಾ ಹಾಗೂ ಪುತ್ರಿಯ ಮೇಲೆ ಶನಿವಾರ ರಾತ್ರಿ ಮೂರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

5 ವರ್ಷದ ಹಿಂದೆ ಭಗ್ದಾವಾಡ ಗ್ರಾಮದ ಕೆರೆಯನ್ನು ನವೀಕರಿಸುವ ಕಾಮಗಾರಿಯನ್ನು ಧರ್ಮೇಶ್ ಪಟೇಲ್ ವಹಿಸಿಕೊಂಡಿದ್ದ. ಕೆರೆಯ ನೀರನ್ನು ಸ್ವಚ್ಛಗೊಳಿಸಿ, ಕೆರೆಯ ದಡದಲ್ಲಿ ಜನರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಯ ಸುತ್ತ ಕೈಗೊಂಡಿದ್ದ ಬಹುತೇಕ ಎಲ್ಲಾ ನವೀಕರಣ ಕಾರ್ಯ ನೀರಿನಲ್ಲಿ ಕೊಚ್ಚಿಹೋಗಿತ್ತು. ಈ ಕುರಿತು ತಾನು ವರದಿ ಮಾಡಿದ್ದಕ್ಕೆ ಆಕ್ರೋಶಗೊಂಡು ಹಲ್ಲೆ ನಡೆಸಲಾಗಿದೆ ಎಂದು ಹರ್ಷದ್ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸುನಿಲ್ ಜೋಷಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News