ನ್ಯಾಟೋ (NATO)ಗೆ ಎಪ್ಪತ್ತು ವರ್ಷ!

Update: 2019-07-08 18:30 GMT

ನ್ಯಾಟೋ ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ 1,000ಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಹೊಂದಿ ಕಾರ್ಯಾಚರಿಸುತ್ತಾ ಬಂದಿದೆ. ಅಮೆರಿಕದ ಅಂತರ್‌ರಾಷ್ಟ್ರೀಯ ಗೂಢಚಾರ ಮತ್ತು ತನಿಖಾ ಸಂಸ್ಥೆ ಸಿಐಎ ಜೊತೆಗೆ ನೇರ ಹೊಂದಾಣಿಕೆಯೊಂದಿಗೆ ಈ ಸಂಸ್ಥೆ ಕಾರ್ಯಾಚರಿಸುತ್ತಾ ಬರುತ್ತಿದೆ. ಅದಷ್ಟೇ ಅಲ್ಲದೆ ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವ ವಾಣಿಜ್ಯ ಸಂಘಟೆ (WTO) ಜಾಗತಿಕ ಬಂಡವಾಳಶಾಹಿ ಸಂಸ್ಥೆಗಳು ಕೂಡ ನ್ಯಾಟೋದ ಅಣತಿಯಂತೆಯೇ ಕಾರ್ಯನಿರ್ವಹಿಸುತ್ತಾ ಬಂದಿವೆ.


ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್ (ನ್ಯಾಟೋ- NATO) ತನ್ನ ಸ್ಥಾಪನೆಯ ಎಪ್ಪತ್ತನೇ ವಾರ್ಷಿಕವನ್ನು ಇದೇ 2019ರ ಎಪ್ರಿಲ್ 4ರಂದು ಆಚರಿಸಿತು. ಇದು ಅಂತರ್‌ರಾಷ್ಟ್ರೀಯವಾಗಿ ಸಾಕಷ್ಟು ಸುದ್ಧಿಯನ್ನು ಕೂಡ ಮಾಡಿತ್ತು. ನ್ಯಾಟೋವನ್ನು ರದ್ದುಗೊಳಿಸಬೇಕೆಂಬ ಒತ್ತಾಯದೊಂದಿಗೆ ಅಮೆರಿಕವೂ ಸೇರಿದಂತೆ ನ್ಯಾಟೋ ಸದಸ್ಯ ರಾಷ್ಟ್ರಗಳಲ್ಲೆಲ್ಲಾ ಜನರ ಪ್ರತಿಭಟನೆಗಳು ನಡೆದವು. ಹಲವಾರು ರಾಷ್ಟ್ರಗಳಲ್ಲಿ ನ್ಯಾಟೋ ಸದಸ್ಯತ್ವದಿಂದ ತಮ್ಮ ತಮ್ಮ ರಾಷ್ಟ್ರಗಳು ಹೊರಗೆ ಬರಬೇಕೆಂಬ ಒತ್ತಾಯವೂ ಜನರಿಂದ ಕೇಳಿ ಬಂತು. ಅಲ್ಲದೇ ನ್ಯಾಟೋ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಡೆಸಿದ ಮಾರಣಹೋಮಗಳನ್ನು ಖಂಡಿಸಿ ಹಲವಾರು ರಾಷ್ಟ್ರಗಳಲ್ಲಿ ಜನರು ಬೀದಿಗೆ ಇಳಿದು ಪ್ರತಿಭಟಿಸಿದರು.

1949ರ ಎಪ್ರಿಲ್ 4ರಂದು ಇದನ್ನು ಅಮೆರಿಕದ ವಾಶಿಂಗ್ಟನ್ ನಲ್ಲಿ ಹುಟ್ಟುಹಾಕಲಾಗಿತ್ತು. ಅಮೆರಿಕದ ಹಿಡಿತವಿರುವ ಈ ಸೇನಾ ಸಂಘಟನೆಯಲ್ಲಿ ಜಗತ್ತಿನ 26 ರಾಷ್ಟ್ರಗಳು ಸದಸ್ಯ ರಾಷ್ಟ್ರಗಳಾಗಿದ್ದವು. ಯೂರೋಪಿನ ಬಹುತೇಕ ರಾಷ್ಟ್ರಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಅಲ್ಲದೆ ಜಗತ್ತಿನ ಇತರ ಹಲವಾರು ರಾಷ್ಟ್ರಗಳು ಇದರೊಂದಿಗೆ ಸೇನಾ ಸಹಕಾರ ಒಪ್ಪಂದಗಳನ್ನು ಹೊಂದಿವೆ. ಇದು ಇದುವರೆಗೂ ಜಾಗತಿಕವಾಗಿ ಸುಮಾರು 20 ದಶಲಕ್ಷ ಜನರನ್ನು ಹತ್ಯೆ ಮಾಡಿದೆಯೆಂಬ ಒಂದು ಅಂದಾಜಿದೆ. ಎರಡನೇ ಮಹಾಯುದ್ಧದ ನಂತರದ ಶಾಂತಿಯುತ ಕಾಲಘಟ್ಟವೆಂದು ಪರಿಗಣಿಸಿದ ಕಾಲದಲ್ಲೇ ಈ ಮಟ್ಟದಲ್ಲಿ ಜನರ ಮಾರಣ ಹೋಮಕ್ಕೆ ಈ ಸಂಘಟನೆ ನೇರ ಕಾರಣವಾಗಿದೆ. ಶಾಂತಿಯುತ ಕಾಲಘಟ್ಟವೆಂದು ಬಿಂಬಿಸಿದ್ದು ಕೂಡ ಇವೇ ರಾಷ್ಟ್ರಗಳು. ವಿಶ್ವ ಸಂಸ್ಥೆ ಸೇರಿದಂತೆ ಈ ಎಲ್ಲಾ ಜಾಗತಿಕ ಸಂಸ್ಥೆಗಳನ್ನು ವಿಶ್ವಶಾಂತಿಯನ್ನು ಹಾಗೂ ವಿಶ್ವದಾದ್ಯಂತ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮತ್ತು ಸ್ಥಾಪಿಸುವ ಉದ್ದೇಶಗಳಿಂದಲೇ ಸ್ಥಾಪಿಸಲಾಗಿದೆ ಎಂದೇ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳು ಬಿಂಬಿಸಿಕೊಂಡು ಬಂದಿವೆ. ಜಾಗತಿಕ ಬಿಕ್ಕಟ್ಟು ಉಲ್ಭಣಗೊಂಡು ವಿಶ್ವಯುದ್ದಗಳಾಗಿ ಮಾರ್ಪಟ್ಟು ಭಾರೀ ನಷ್ಟಗಳಿಗೆ ಕಾರಣವಾಗಲು ತೊಡಗಿತು. ನಷ್ಟಗಳಿಲ್ಲದೇ ಅಥವಾ ನಷ್ಟಗಳನ್ನು ಕಡಿಮೆಗೊಳಿಸಿ ಜಗತ್ತಿನ ಮಾರುಕಟ್ಟೆಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಪರೋಕ್ಷ ಹಾಗೂ ಪ್ರತ್ಯಕ್ಷ ಮಾರ್ಗಗಳಾಗಿ ವಿಶ್ವಸಂಸ್ಥೆ, ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯಂತಹವುಗಳನ್ನು ಸ್ಥಾಪಿಸಲಾಯಿತು. ಮೊದಲನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿಂದಿನ ವಸಾಹತುಗಳು ಸ್ವಾತಂತ್ರ್ಯಗೊಂಡು ರಶ್ಯ ಹಾಗೂ ಹಲವು ರಾಷ್ಟ್ರಗಳಲ್ಲಿ ಕ್ರಾಂತಿಗಳು ನಡೆದು ಸಮಾಜವಾದಿ ವ್ಯವಸ್ಥೆ ಸ್ಥಾಪಿಸಲ್ಪಟ್ಟಿತು. ಎರಡನೇ ಜಾಗತಿಕ ಯುದ್ಧದ ನಂತರ ಚೀನಾದಲ್ಲಿ ಕ್ರಾಂತಿ ನಡೆದು ನವ ಪ್ರಜಾಪ್ರಭುತ್ವ ವ್ಯವಸ್ಥೆ ಚೀನ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ಸ್ಥಾಪಿಸಲಾಗುತ್ತದೆ. ಬ್ರಿಟಿಷ್ ವಸಾಹತುಗಳಾಗಿದ್ದ ಭಾರತವೂ ಸೇರಿದಂತೆ ಹಲವಾರು ದೇಶಗಳು ನೇರ ವಸಾಹತುಶಾಹಿ ಆಳ್ವಿಕೆಯಿಂದ ಹೊರಹೋಗುತ್ತವೆ. ಅಂದರೆ ಯುದ್ಧವು ಜಾಗತಿಕವಾಗಿ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿತ್ತು. ಬ್ರಿಟಿಷ್ ತರಹದ ಹಿಂದಿನ ಬೃಹತ್ ವಸಾಹತುಶಾಹಿ ಶಕ್ತಿಗಳು ತಮ್ಮ ಹಿಂದಿನ ವಸಾಹತುಗಳನ್ನು ಕಳೆದುಕೊಂಡು ಶಕ್ತಿಯನ್ನು ಕಳೆದುಕೊಳ್ಳಬೇಕಾಗಿ ಬಂದಿತು.
ಎರಡನೇ ಜಾಗತಿಕ ಯುದ್ಧಕ್ಕೆ ಒಬ್ಬ ಮುಖ್ಯ ಕಾರಣಕರ್ತನಾದ ಜರ್ಮನಿಯ ಜನಾಂಗೀಯ ಫ್ಯಾಶಿಸ್ಟ್ ಸರ್ವಾಧಿಕಾರಿ ಹಿಟ್ಲರ್ ಇಡೀ ಜಗತ್ತನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಒಂದೊಂದೇ ರಾಷ್ಟ್ರಗಳನ್ನು ಆಕ್ರಮಿಸುತ್ತಾ ಬರಲಾರಂಭಿಸಿದ್ದ. ಸಮಾಜವಾದಿ ಸೋವಿಯತ್ ರಶ್ಯ ಗಣತಂತ್ರವನ್ನು ಆಕ್ರಮಿಸಲು ದಾಳಿ ನಡೆಸಿದ. ಭೀಕರ ಯುದ್ಧ ನಡೆಯಿತು. ಸೋವಿಯತ್ ರಶ್ಯ ಗಣತಂತ್ರದ ಕೆಂಪು ಸೇನೆ ಹಿಟ್ಲರ್‌ನ ನಾಜಿ ಸೈನ್ಯವನ್ನು ಸೋಲಿಸಿ ಜರ್ಮನಿಯ ರಾಜಧಾನಿ ಬರ್ಲಿನ್‌ವರೆಗೆ ಅಟ್ಟಿಸಿಕೊಂಡು ಹೋಯಿತು. ಸೋಲಿನ ಆಘಾತ ತಾಳಲಾಗದೇ ಹಿಟ್ಲರ್ ತನ್ನ ಬಂದೂಕಿನಿಂದಲೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಲಾಗುತ್ತಿದೆ. ಆತ ಆ ಕದನದಲ್ಲಿ ಸತ್ತುಹೋಗಿರುವುದು ಮಾತ್ರ ಖಾತ್ರಿಯ ವಿಚಾರ.

ಇದರ ಪರಿಣಾಮ ಜರ್ಮನಿ ಎರಡು ಭಾಗವಾಗಿ ಬಂಡವಾಳಶಾಹಿ ವ್ಯವಸ್ಥೆಯನ್ನು ಹೊಂದಿದ ಪಶ್ಚಿಮ ಜರ್ಮನಿ ಹಾಗೂ ಸಮಾಜವಾದಿ ವ್ಯವಸ್ಥೆಯನ್ನು ಹೊಂದಿದ ಪೂರ್ವ ಜರ್ಮನಿ ಎಂದು ಕರೆಸಿಕೊಂಡಿತು. ಹಿಟ್ಲರಿನ ಫ್ಯಾಶಿಸ್ಟ್ ಸೇನೆಯೊಡನೆ ಕಾದಾಟದಲ್ಲಿ ಅಮೆರಿಕವಾಗಲಿ ಯೂರೋಪಿನ ರಾಷ್ಟ್ರಗಳಾಗಲೀ ರಶ್ಯದೊಂದಿಗೆ ಕೈಜೋಡಿಸಿರಲಿಲ್ಲ. ಬದಲಿಗೆ ಸಮಾಜವಾದಿ ರಶ್ಯ ಪತನವಾಗಬೇಕೆಂಬ ಬಯಕೆಯೊಂದಿಗೆ ಕದನವನ್ನು ನಿರೀಕ್ಷಿಸುತ್ತಾ ಉಳಿದಿದ್ದವು. ಯುದ್ಧದಲ್ಲಿ ಹಿಟ್ಲರ್ ಸೋತು ಮರಣ ಹೊಂದಿದರೂ ಅದರಿಂದ ಸೋವಿಯತ್ ರಶ್ಯ ಗಣತಂತ್ರಕ್ಕೇ ಸಾಕಷ್ಟು ಹಾನಿ ಸಂಭವಿಸಿತ್ತು. ಅದನ್ನು ಬಂಡವಾಳ ಮಾಡಿಕೊಳ್ಳಲು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಹವಣಿಸಿದ್ದವು. ಸೋವಿಯತ್ ರಶ್ಯ ಗಣರಾಜ್ಯ ಯಾವಾಗ ಹಿಟ್ಲರ್‌ನನ್ನು ಸೋಲಿಸಿ ಗೆಲುವು ಸಾಧಿಸಿತೋ, ಅದನ್ನು ನೋಡಿ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ತಮ್ಮ ತಮ್ಮ ಬಂಡವಾಳಶಾಹಿ ಕೂಟಗಳನ್ನು ಸಧೃಢೀಕರಿಸಿಕೊಳ್ಳಲು ವಿಶ್ವಶಾಂತಿ ಹಾಗೂ ಸಾಮರಸ್ಯ ಕಾಪಾಡುವ; ಸಮಾನತೆ ಹಾಗೂ ಪ್ರಜಾಪ್ರಭುತ್ವ ಸ್ಥಾಪಿಸುವ ಮಾತುಗಳನ್ನು ಮುಂದಿಡಲು ಶುರು ಮಾಡಿದವು.

ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್ ನಂತಹ ಜಾಗತಿಕ ರಾಜಕೀಯ, ಸೇನಾತ್ಮಕ, ಆರ್ಥಿಕ ಸಂಘಟನೆಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಅದರಲ್ಲಿ ಸೋವಿಯತ್ ರಶ್ಯ ಪ್ರಭಾವದ ಸಮಾಜವಾದ ಜಗತ್ತಿನಾದ್ಯಂತ ಹರಡದಂತೆ ತಡೆಯುವ, ಸೋವಿಯತ್ ಹಿತಾಸಕ್ತಿಗಳು ಜಗತ್ತಿನ ಇತರ ಪ್ರದೇಶಗಳಿಗೂ ವಿಸ್ತರಿಸುವುದನ್ನು ತಡೆಯುವ ಒಂದು ಮುಖ್ಯ ಗುರಿಯಿದ್ದಿತು. ವಿಶ್ವಸಂಸ್ಥೆಯಲ್ಲಿ ಸೋವಿಯತ್ ರಶ್ಯ ಕೂಡ ವೀಟೋ ಅಧಿಕಾರ ಹೊಂದಿರುವ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿದ್ದರಿಂದ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಿಗೆ ತಾವೆಣಿಸಿದಂತೆ ಎಲ್ಲವನ್ನೂ ತೀರ್ಮಾನಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ ಅಮೆರಿಕ ಯೂರೋಪಿನ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳನ್ನು ಸಂಘಟಿಸಿ ತನ್ನದೇ ಪ್ರತ್ಯೇಕ ಸೇನಾ ಸಂಘಟನೆ ನ್ಯಾಟೋವನ್ನು ಸ್ಥಾಪಿಸಿತು. ಸೋವಿಯತ್ ಒಕ್ಕೂಟ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದನ್ನು ಸೇನಾತ್ಮಕವಾಗಿ ತಡೆಯುವ ಮತ್ತು ಅಮೆರಿಕ ಹಾಗೂ ಯೂರೋಪಿನ ಜಾಗತಿಕ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ ನ್ಯಾಟೋವನ್ನು ಸ್ಥಾಪಿಸಲಾಗಿತ್ತು.

ಸೋವಿಯತ್ ರಶ್ಯ ನ್ಯಾಟೋ ವಿಸ್ತರಣೆಯನ್ನು ತಡೆಯಲು 1955ರಲ್ಲಿ ವಾರ್ ಸಾ ಒಪ್ಪಂದವನ್ನು(warsaw pact) ಸಮಾಜವಾದಿ ಎಂದು ಕರೆದುಕೊಂಡಿದ್ದ ಪೂರ್ವ ಮತ್ತು ಕೇಂದ್ರ ಯೂರೋಪಿನ ಇತರ ರಾಷ್ಟ್ರಗಳೊಂದಿಗೆ ರೂಪಿಸಿಕೊಂಡಿತ್ತು. ಇದು ಕೂಡ ಸೋವಿಯತ್ ರಶ್ಯ ನೇತೃತ್ವದ ಆರ್ಥಿಕ ಮತ್ತು ಸೇನಾತ್ಮಕ ಒಪ್ಪಂದವಾಗಿತ್ತು. ಸೋವಿಯತ್ ಒಕ್ಕೂಟದೊಂದಿಗಿನ ಅಮೆರಿಕದ ಶೀತಲ ಸಮರದಲ್ಲಿ ಪ್ರಮುಖ ಪಾತ್ರವನ್ನು ನ್ಯಾಟೋ ವಹಿಸಿತ್ತು. ನ್ಯಾಟೋ ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ 1,000ಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಹೊಂದಿ ಕಾರ್ಯಾಚರಿಸುತ್ತಾ ಬಂದಿದೆ. ಅಮೆರಿಕದ ಅಂತರ್‌ರಾಷ್ಟ್ರೀಯ ಗೂಢಚಾರ ಮತ್ತು ತನಿಖಾ ಸಂಸ್ಥೆ ಸಿಐಎ ಜೊತೆಗೆ ನೇರ ಹೊಂದಾಣಿಕೆಯೊಂದಿಗೆ ಈ ಸಂಸ್ಥೆ ಕಾರ್ಯಾಚರಿಸುತ್ತಾ ಬರುತ್ತಿದೆ. ಅದಷ್ಟೇ ಅಲ್ಲದೆ ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವ ವಾಣಿಜ್ಯ ಸಂಘಟನೆ (WTO) ಜಾಗತಿಕ ಬಂಡವಾಳಶಾಹಿ ಸಂಸ್ಥೆಗಳು ಕೂಡ ನ್ಯಾಟೋದ ಅಣತಿಯಂತೆಯೇ ಕಾರ್ಯನಿರ್ವಹಿಸುತ್ತಾ ಬಂದಿವೆ.

ಸೋವಿಯತ್ ಒಕ್ಕೂಟ ಸಮಾಜವಾದದ ಹೆಸರಿನಲ್ಲಿ ಅಧಿಕಾರ ಶಾಹಿ ಬಂಡವಾಳವಾದಿಯಾಗಿ 1970ರ ವೇಳೆಗಾಗಲೇ ಮಾರ್ಪಾಟು ಹೊಂದಿತ್ತು. ಇವೆಲ್ಲದರಿಂದಾಗಿ ಅಲ್ಲಿ ಬೆಳೆಯಬೇಕಿದ್ದ ಸಮಾಜವಾದಿ ವ್ಯವಸ್ಥೆ ದಾರಿ ತಪ್ಪಿತು. ಅದು ಜಗತ್ತಿನ ಹಲವು ರಾಷ್ಟ್ರಗಳ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ವಿಚಾರವಾಗಿಯೇ ಅಮೆರಿಕದೊಂದಿಗೆ ಶೀತಲ ಸಮರಕ್ಕಿಳಿದಿತ್ತು. ಇದರಿಂದಾಗಿ ಹಲವಾರು ಪ್ರಾದೇಶಿಕ ಯುದ್ಧಗಳು, ಪರೋಕ್ಷ ಯುದ್ಧಗಳು, ವ್ಯಾಪಾರಿ ಕದನಗಳು, ಶಸ್ತ್ರಾಸ್ತ್ರ ಪೈಪೋಟಿಗಳು ತೀವ್ರವಾದವು. ಅದರ ಪರಿಣಾಮವಾಗಿ ಬೆಳೆದುಬಂದ ಬಿಕ್ಕಟ್ಟುಗಳ ಕಾರಣದಿಂದ 26 ಡಿಸೆಂಬರ್ 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡಿತು. 1917ಕ್ಕೂ ಹಿಂದಿನ ಕ್ರಾಂತಿ ಪೂರ್ವದ ಧ್ವಜ ಹಾರಾಟದೊಂದಿಗೆ ರಶ್ಯ ಗಣರಾಜ್ಯ ಪ್ರತ್ಯೇಕಗೊಂಡಿತು. ನಂತರ ರಶ್ಯ ನೇತೃತ್ವದಲ್ಲಿ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಕೆಲವು ಗಣರಾಜ್ಯಗಳು ಸಡಿಲವಾದ ‘ಕಾಮನ್‌ವೆಲ್ತ್ ಆಫ್ ಇಂಡಿಪೆಡೆಂಟ್ ಸ್ಟೇಟ್ಸ್’ (ಸಿಐಎಸ್) ಎನ್ನುವ ರಾಜಕೀಯ ಸಂಘಟನೆಯನ್ನು ಕಟ್ಟಿಕೊಂಡವು. ಕೆಲವು ಗಣರಾಜ್ಯಗಳು ಸೋವಿಯತ್ ಒಕ್ಕೂಟದಿಂದ ಸ್ವತಂತ್ರಗೊಂಡು ಪ್ರತ್ಯೇಕ ರಾಷ್ಟ್ರಗಳೆಂದು ಘೋಷಿಸಿಕೊಂಡವು. ಸೋವಿಯತ್ ಒಕ್ಕೂಟದ ಪತನದೊಂದಿಗೆ ನ್ಯಾಟೋದ ಪ್ರಸ್ತುತತೆ ಹೋಯಿತು ಎಂಬ ಚರ್ಚೆ ಆಗಲೇ ಮುನ್ನೆಲೆಗೆ ಬಂದಿತು.

ಆದರೆ ಸೋವಿಯತ್ ಒಕ್ಕೂಟದ ಬೆದರಿಕೆ ಅಂತ್ಯಗೊಂಡು ಮೂರು ದಶಕಗಳಾಗುತ್ತಾ ಬಂದಿದ್ದರೂ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ನ್ಯಾಟೋವನ್ನು ಉಳಿಸಿಕೊಂಡು ತಮ್ಮ ಹಿತಾಸಕ್ತಿಗಳಿಗಾಗಿ ಬಳಸುತ್ತಾ ಬಂದಿವೆ. ಸೇನಾತ್ಮಕವಾಗಿ ಮಾತ್ರವಲ್ಲದೇ ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳನ್ನು ನ್ಯಾಟೋ ನಡೆಸುತ್ತಾ ಬಂದಿದೆ. ಅಫ್ಘಾನಿಸ್ತಾನ, ಇರಾಕ್, ಲಿಬಿಯಾ, ಸಿರಿಯಾ, ಹಳೆಯ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬೋಸ್ನಿಯಾ, ಹೆರ್ಜೆಗೋವಿನಾ, ಯುಗೋಸ್ಲಾವಿಯಾ ಮೊದಲಾದ ರಾಷ್ಟ್ರಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಿ, ಅಲ್ಲಿನ ಸರಕಾರಗಳನ್ನು ಕಿತ್ತು ತಮ್ಮ ಬಾಲಂಗೋಚಿ ಸರಕಾರಗಳನ್ನು ಸ್ಥಾಪಿಸಲು ನ್ಯಾಟೋವನ್ನು ವ್ಯಾಪಕವಾಗಿ ಬಳಸಲಾಗಿದೆ. ಇರಾಕ್, ಯುಗೋಸ್ಲಾವಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರನ್ನು ಸೆರೆಹಿಡಿದು ಕೊಂದುಹಾಕುವಲ್ಲಿ ನ್ಯಾಟೋ ಪಾತ್ರ ವಹಿಸಿದೆ. ಆಫ್ರಿಕದ ರಾಷ್ಟ್ರಗಳಲ್ಲಿ, ಅರಬ್ ರಾಷ್ಟ್ರಗಳಲ್ಲಿ ನ್ಯಾಟೋ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇನಾ ಕಾರ್ಯಚರಣೆಗಳನ್ನು ನಡೆಸಿದೆ. ಲಕ್ಷಾಂತರ ಜನರ ಸಾವುಗಳಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣವಾಗಿದೆ. ಜಗತ್ತಿನ ಹಲವಾರು ರಾಷ್ಟ್ರಗಳ ವಿರುದ್ಧ ಪ್ರಚಾರ ಯುದ್ಧಗಳನ್ನು ನಡೆಸುತ್ತಾ ಬಂದಿದೆ. ಇವೆಲ್ಲವನ್ನೂ ಪ್ರಜಾ ಪ್ರಭುತ್ವದ ಸ್ಥಾಪನೆಗಾಗಿ, ಆಯಾ ರಾಷ್ಟ್ರಗಳ ಜನರ ನೆರವಿಗಾಗಿ, ಜಗತ್ತಿನಲ್ಲಿ ಶಾಂತಿ ಸೌಹಾದರ್ ಸ್ಥಾಪಿಸಲಿಕ್ಕಾಗಿ ಎಂದೇ ಬಿಂಬಿಸುತ್ತಾ ಮಾಡಲಾಗಿದೆ.!

 ಅಷ್ಟೇ ಅಲ್ಲದೆ ತನ್ನ ಪ್ರಭಾವದ ವಿಸ್ತರಣೆಯನ್ನೂ ಮಾಡುತ್ತಿದೆ. ಇತ್ತೀಚೆಗೆ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಾದ ಬ್ರೆಜಿಲ್, ಕೊಲಂಬಿಯಾದಂತಹ ರಾಷ್ಟ್ರಗಳನ್ನೂ ಸೇರಿಸಿಕೊಂಡಿದೆ. 26 ಇದ್ದ ಸದಸ್ಯ ರಾಷ್ಟ್ರಗಳ ಸಂಖ್ಯೆ ಜಾರ್ಜಿಯಾ ರಾಷ್ಟ್ರ ಸೇರಿದಂತೆ ಈಗ 29ಕ್ಕೆ ವಿಸ್ತರಿಸಿದೆ.

ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲೆ ಅವುಗಳ ಜಿಡಿಪಿಯ ಶೇ. 2ಕ್ಕಿಂತಲೂ ಹೆಚ್ಚಿನ ನಿರ್ದಿಷ್ಟ ಮೌಲ್ಯದ ಆರ್ಥಿಕ ಪಾಲುದಾರಿಕೆಯನ್ನು ನಿಗದಿ ಮಾಡಿ ಪಡೆಯುತ್ತಿದೆ. ಇದು ಹಲವು ರಾಷ್ಟ್ರಗಳಿಗೆ ದೊಡ್ಡ ಹೊರೆಯಾಗಿ ಪರಿಣ ಮಿಸಿದೆ. ಹಲವು ಇಕ್ಕಟ್ಟುಗಳನ್ನು ಸೃಷ್ಟಿ ಮಾಡಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಬಿಕ್ಕಟ್ಟು ಹೆಚ್ಚಿರುವುದರಿಂದ ಅದು ನ್ಯಾಟೋ ರಾಷ್ಟ್ರಗಳ ನಡುವಿನ ಮತ್ತಷ್ಟು ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಹಲವು ಮುಂದುವರಿದ ರಾಷ್ಟ್ರಗಳೇ ಈಗ ನ್ಯಾಟೋವಿಗೆ ತಮ್ಮ ನಿಗದಿತ ಪಾಲುದಾರಿಕೆ ಹಣ ನೀಡಲು ಹೆಣಗಾಡುವ ಪರಿಸ್ಥಿತಿ ಬಂದಿದೆ. ಅಮೆರಿಕ, ಯುನೈಟೆಡ್ ಕಿಂಗ್ ಡಂ, ಕೆನಡಾ, ಜರ್ಮನಿ, ಫ್ರಾನ್ಸ್‌ನಂತಹ ಮುಂದುವರಿದ ರಾಷ್ಟ್ರಗಳೇ ಹಣಕಾಸು ಬಿಕ್ಕಟ್ಟಿನಲ್ಲಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಅಮೆರಿಕ ಇತರ ಸದಸ್ಯ ರಾಷ್ಟ್ರಗಳು ನ್ಯಾಟೋಗೆ ಹೆಚ್ಚಿನ ಹಣಕಾಸು ಒದಗಿಸಬೇಕೆಂದು ಒತ್ತಾಯ ಮಾಡುತ್ತಿದೆ.

ಈಗಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ‘‘ನ್ಯಾಟೋ ಸದಸ್ಯ ರಾಷ್ಟ್ರಗಳು ತಮ್ಮ ಪಾಲಿನ ಹಣವನ್ನು ನೀಡುತ್ತಿಲ್ಲ. ಅಮೆರಿಕ ಅದನ್ನೆಲ್ಲಾ ಭರಿಸಬೇಕಾಗಿ ಬಂದಿದೆ. ಇನ್ನು ಮುಂದೆ ಅದು ಸಾಧ್ಯವಿಲ್ಲ’’ ಎಂಬ ಮಾತುಗಳನ್ನು ಬಹಿರಂಗವಾಗಿ ಆಡಿದ್ದರು. ಜಾಗತಿಕ ಆರ್ಥಿಕ ಬಿಕ್ಕಟ್ಟು ನ್ಯಾಟೋ ಬಿಕ್ಕಟ್ಟಿಗೂ ಕಾರಣವಾಗಿದ್ದರೂ ನ್ಯಾಟೋ ವಿಸರ್ಜನೆಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಮುಂದೆ ಇನ್ನಷ್ಟು ಜನರ ಮಾರಣಹೋಮಗಳ ವಾರಸುದಾರಿಕೆ ಅದರದಾಗಬಹುದು. ಇನ್ನಷ್ಟು ವಿನಾಶಕಾರಿ ಯುದ್ಧಗಳಲ್ಲಿ ಅದು ಪಾಲ್ಗೊಳ್ಳಬಹುದು.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News