ಬಿಜೆಪಿ ಸಂಸದರಿಂದಲೇ ಕೇಂದ್ರ ಸರಕಾರಕ್ಕೆ ತರಾಟೆ!

Update: 2019-07-09 03:49 GMT

ಹೊಸದಿಲ್ಲಿ, ಜು.9: ತಮ್ಮ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದೆ ಹೇಮಮಾಲಿನಿ ಹಾಗೂ ರಾಜೀವ್ ಪ್ರತಾಪ್ ರೂಡಿ ಅಸಮಾಧಾನ ವ್ಯಕ್ತಪಡಿಸಿದ ಸ್ವಾರಸ್ಯಕರ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು.

ಬಿಹಾರದ ಸರಣ್ ಕ್ಷೇತ್ರದಲ್ಲಿ ಪರಸರ ಪ್ರವಾಸೋದ್ಯಮ ಉತ್ತೇಜಿಸಲು ಸಾಕಷ್ಟು ನೆರವು ನೀಡುತ್ತಿಲ್ಲ ಎಂದು ರೂಡಿ ಆಕ್ಷೇಪಿಸಿದರೆ, ಕೃಷ್ಣಾ ಸರ್ಕ್ಯೂಟ್‌ನಡಿ ವೃಂದಾವನ ಮತ್ತು ಸುತ್ತಮುತ್ತಲಿನ ತಾಣಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಸಾಲಿನ ಹಲವು ಮಂದಿ ಸದಸ್ಯರು ಮೇಜುಕುಟ್ಟಿ ಈ ಇಬ್ಬರು ಸಂಸದರ ಆಗ್ರಹವನ್ನು ಬೆಂಬಲಿಸಿದರು.

"ಸೋನ್‌ಪುರ ಮೇಳ ಭಾರತದ ಅತಿದೊಡ್ಡ ಜಾನುವಾರು ಜಾತ್ರೆ ಎನಿಸಿಕೊಂಡಿದೆ. ಅಪರೂಪದ ಪ್ರಬೇಧವಾಗಿರುವ ಡಾಲ್ಫಿನ್‌ಗಳು ಈ ಭಾಗದಲ್ಲಿ ಕಂಡುಬರುತ್ತವೆ. ಎಂಟು ರಾಜ್ಯಗಳು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಪಡೆದಿವೆ. ಅದರೆ ಬಿಹಾರಕ್ಕೆ ನಯಾಪೈಸೆ ಸಿಕ್ಕಿಲ್ಲ" ಎಂದು ರೂಡಿ ಕಿಡಿ ಕಾರಿದರು.

"ಕಳೆದ ಮೂರು ವರ್ಷಗಳಲ್ಲಿ ನಾನು ಪ್ರಸ್ತಾವದೊಂದಿಗೆ ಅಡ್ಡಾಡುತ್ತಿದ್ದೇನೆ. ಆದರೆ ಈ ಹಣ ಎಲ್ಲಿ ಹೋಗುತ್ತದೆ ಎಂದು ನನಗೆ ಅರ್ಥವಾಗಿಲ್ಲ. ನಾನು 2018ರಲ್ಲಿ ನೀಡಿದ ಪ್ರಸ್ತಾವ ಇನ್ನೂ ಬಾಕಿ ಇದೆ" ಎಂದು ವಿವರಿಸಿದರು.

ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, "ಇಂಥ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ವಿವರವಾದ ಯೋಜನಾ ವರದಿಗಳ ಸಹಿತ ಪ್ರಸ್ತಾವ ಬರಬೇಕು" ಎಂದು ಸ್ಪಷ್ಟಪಡಿಸಿದರು.

"ಈ ಬಗ್ಗೆ ಈಗಾಗಲೇ ವಿವರವಾದ ಯೋಜನಾ ವರದಿ ಸಲ್ಲಿಸಿದ್ದೆ. ಅದನ್ನು ಈಗ ಸದನದಲ್ಲಿ ಮಂಡಿಸುತ್ತಿದ್ದೇನೆ. ಅಧಿಕಾರಿಗಳು ಅದನ್ನು ಸಚಿವರ ಗಮನಕ್ಕೆ ತಂದಿಲ್ಲ ಎಂದಾದರೆ, ಅವರ ವಿರುದ್ಧ ಹಕ್ಕುಚ್ಯುತಿ ಪ್ರಕರಣಕ್ಕೆ ಅರ್ಹವಾದ ವಿಚಾರ" ಎಂದು ರೂಡಿ ಪ್ರತಿಕ್ರಿಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಹೇಮಮಾಲಿನಿ, ಮಥುರಾ, ವೃಂದಾವನ, ಗೋವರ್ಧನ, ಬರ್ಸಾನ ಮತ್ತು ನಂದಗಾಂವ್ ಅಭಿವೃದ್ಧಿಗೆ ಕೃಷ್ಣ ಸರ್ಕ್ಯೂಟ್ ಯೋನೆಯಡಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News