2016-18 ಅವಧಿಯಲ್ಲಿ ಬಿಜೆಪಿಗೆ 915 ಕೋಟಿ ರೂ. ಕಾರ್ಪೊರೇಟ್ ದೇಣಿಗೆ

Update: 2019-07-09 11:29 GMT

ಹೊಸದಿಲ್ಲಿ, ಜು.9:  ಆರ್ಥಿಕ ವರ್ಷ 2016-17 ಹಾಗೂ 2017-18 ನಡುವೆ ಭಾರತೀಯ ಜನತಾ ಪಕ್ಷವು ಕಾರ್ಪೊರೇಟ್ ಸಂಸ್ಥೆಗಳಿಂದ ಬರೋಬ್ಬರಿ 915.596 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಪಡೆದ ದೇಣಿಗೆಗಳ ಮೊತ್ತ ಕೇವಲ ರೂ 55.36 ಕೋಟಿ ಆಗಿದೆ.

ಚುನಾವಣಾ ಆಯೋಗದ ದತ್ತಾಂಶಗಳ ಆಧರಿತ ಈ ವರದಿಯು ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ, ಸಿಪಿಐ, ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಇವುಗಳು ಪಡೆದ 20,000 ರೂ. ಹಾಗೂ ಅದಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಪರಿಗಣಿಸಿದೆ. ಬಹುಜನ ಸಮಾಜ ಪಕ್ಷ ತಾನು ಈ ಅವಧಿಯಲ್ಲಿ ಯಾರಿಂದಲೂ ರೂ 20,000ಕ್ಕಿಂತ ಹೆಚ್ಚಿನ ದೇಣಿಗೆ ಪಡೆದಿಲ್ಲವೆಂದು ಹೇಳಿದ್ದರಿಂದ ಈ ಪಕ್ಷ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

ಬಿಜೆಪಿ ಪಡೆದ ಒಟ್ಟು ದೇಣಿಗೆಗಳ ಪೈಕಿ ಶೇ.94ರಷ್ಟು ದೇಣಿಗೆಗಳನ್ನು 1,731  ಕಾರ್ಪೊರೇಟ್ ಸಂಸ್ಥೆಗಳಿಂದ ಪಡೆದಿದೆ.

ಅತ್ತ ಕಾಂಗ್ರೆಸ್ ಪಕ್ಷ ರೂ 55.36 ಕೋಟಿ ದೇಣಿಗೆಯನ್ನು 151 ಕಾರ್ಪೊರೇಟ್ ಸಂಸ್ಥೆಗಳಿಂದ ಪಡೆದಿದ್ದರೆ, ಎನ್‍ಸಿಪಿ ರೂ 7.73 ಕೋಟಿ, ಸಿಪಿಎಂ ರೂ 4.42 ಕೋಟಿ ಹಾಗೂ ಎಐಟಿಸಿ ರೂ 2.03 ಕೋಟಿ ದೇಣಿಗೆಯನ್ನು  ಪಡೆದಿವೆ. ಸಿಪಿಐ ಪಡೆದ ಒಟ್ಟು ದೇಣಿಗೆಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಪಾಲು ಕೇವಲ ಶೇ 2ರಷ್ಟಾಗಿದೆ.

ಹೀಗೆ ಕಾರ್ಪೊರೇಟ್ ಸಂಸ್ಥೆಗಳು ವಿವಿಧ ಪಕ್ಷಗಳಿಗೆ ನೀಡಿದ ಒಟ್ಟು ರೂ 985.18 ಕೋಟಿ ದೇಣಿಗೆಗಳ ಪೈಕಿ ರೂ 22.59 ಕೋಟಿ ದೇಣಿಗೆಯನ್ನು ನೀಡಿದ ಕಂಪೆನಿಗಳ ಬಗ್ಗೆ ಯಾವುದೇ ವಿವರ ಲಭ್ಯವಿಲ್ಲ. ರೂ 120.14 ಕೋಟಿ ಮೊತ್ತ ದೇಣಿಗೆ  916 ಮೂಲಗಳಿಂದ ಬಂದಿದ್ದು ಇಲ್ಲಿ ದೇಣಿಗೆ ನೀಡಿದವರ ವಿಳಾಸವೂ ಲಭ್ಯವಿಲ್ಲ. ಬಿಜೆಪಿಗೆ ಇಂತಹ ಶೇ 98.77 ದೇಣಿಗೆಗಳು (ರೂ 118.66) ದೊರೆತಿವೆ.  ಪ್ಯಾನ್ ಅಥವಾ ವಿಳಾಸವಿಲ್ಲದೆ ನೀಡಲಾದ ರೂ 2.50 ಕೋಟಿ ದೇಣಿಗೆ ಮೊತ್ತವೂ ಬಿಜೆಪಿಗೆ ದೊರಕಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅತ್ಯಂತ ಹೆಚ್ಚು ದೇಣಿಗೆ ನೀಡಿದ್ದು ಪ್ರೂಡೆಂಟ್ /ಸತ್ಯಾ ಇಲೆಕ್ಟೋರಲ್ ಟ್ರಸ್ಟ್ ಆಗಿದೆ. ಈ ಟ್ರಸ್ಟ್ ಮುಖಾಂತರ ಬಿಜೆಪಿಗೆ ರೂ 405.52 ಕೋಟಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರೂ 23.90 ಕೋಟಿ ದೊರಕಿತ್ತು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News