ಗಾಯಕ ಹನಿ ಸಿಂಗ್ ವಿರುದ್ಧ ದೂರು ದಾಖಲು

Update: 2019-07-09 14:29 GMT

ಅಮೃತಸರ,ಜು.9: ಹಾಡಿನಲ್ಲಿ ಆಕ್ಷೇಪಾರ್ಹ ಸಾಹಿತ್ಯ ಬಳಸಿದ ಆರೋಪದಲ್ಲಿ ಪಾಪ್ ಗಾಯಕ ಮತ್ತು ರ್ಯಾಪರ್ ಹನಿ ಸಿಂಗ್ ವಿರುದ್ಧ ರಾಜ್ಯ ಮಹಿಳಾ ಆಯೋಗ ದೂರು ದಾಖಲಿಸಿದೆ. ಜೊತೆಗೆ ಟಿ-ಸಿರೀಸ್ ಧ್ವನಿ ಮುದ್ರಣ ಸಂಸ್ಥೆಯ ಸಂಗೀತ ನಿರ್ಮಾಪಕ ಭೂಷಣ್ ಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

‘ಮಕ್‌ನಾ’ ಎಂಬ ಹಾಡಿನಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿರುವ ಕಾರಣಕ್ಕೆ ಹನಿ ಸಿಂಗ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ರಾಜ್ಯ ಗೃಹ ಕಾರ್ಯಾಲಯ, ಪೊಲೀಸ್ ಪ್ರಧಾನ ನಿರ್ದೇಶಕರು ಮತ್ತು ಐಜಿಪಿಗೆ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಮನೀಶಾ ಗುಲಾಟಿ ಪತ್ರ ಬರೆದಿದ್ದರು.

ಈ ಹಾಡು ಅಸಭ್ಯವಾಗಿದ್ದು, ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿರುವ ಗುಲಾಟಿ, ಈ ಹಾಡನ್ನು ರಾಜ್ಯದಲ್ಲಿ ನಿಷೇಧಿಸಬೇಕು ಮತ್ತು ಈ ಬಗ್ಗೆ ಜುಲೈ 12ರ ಒಳಗಾಗಿ ಸ್ಥಿತಿ ವರದಿ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಡಿಸೆಂಬರ್ 21, 2018ರಲ್ಲಿ ಬಿಡುಗಡೆಯಾಗಿರುವ ‘ಮಕ್‌ನಾ’ ಹಾಡನ್ನು ಯೂಟ್ಯೂಬ್‌ನಲ್ಲಿ ಈಗಾಗಲೇ 21 ಕೋಟಿ ಬಾರಿ ವೀಕ್ಷಿಸಲಾಗಿದೆ. ಸಿಂಗ್ ವಿರುದ್ಧ ಸದ್ಯ ಮೊಹಲಿ ಜಿಲ್ಲೆಯ ಮತೌರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2013ರಲ್ಲಿ ಹನಿ ಸಿಂಗ್‌ನ ‘ಮೈ ಹೂ ಬಲತ್ಕಾರಿ’ ಎಂಬ ಹಾಡನ್ನು ನಿಷೇಧಿಸುವಂತೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ಪಂಜಾಬ್ ಸರಕಾರಕ್ಕೆ ಆದೇಶಿಸಿತ್ತು. ಹನಿ ಸಿಂಗ್‌ನ ಹಾಡುಗಳು ನಮ್ಮನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತವೆ. ಹಾಗಾಗಿ ಅವರಂತಹ ಗಾಯಕರನ್ನು ಬಹಿಷ್ಕರಿಸಬೇಕು ಎಂದು ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News