ಹೌಝ್ ಖಝಿ, ಬಲ್ಲಿರಾಮನ್ ಅನ್ನು ಅಯೋಧ್ಯೆಯಾಗಿ ಪರಿವರ್ತಿಸಬಲ್ಲೆವು: ವಿಹಿಂಪ ನಾಯಕನ ಪ್ರಚೋದನಕಾರಿ ಭಾಷಣ
ಹೊಸದಿಲ್ಲಿ, ಜು.10: ಇತ್ತೀಚೆಗೆ ಪಾರ್ಕಿಂಗ್ ವಿಚಾರದ ಕುರಿತಂತೆ ನಡೆದ ಜಗಳವೊಂದು ಕೋಮು ಘರ್ಷಣೆಗೆ ತಿರುಗಿದ್ದ ರಾಜಧಾನಿಯ ಹೌಝ್ ಖಝಿ ಪ್ರದೇಶಕ್ಕೆ ಮೂರು ಮಂದಿ ಬಿಜೆಪಿ ಸಂಸದರು ಭೇಟಿ ನೀಡಿದ ದಿನದಂದೇ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷದ್ ನಾಯಕ ಸುರೇಂದ್ರ ಜೈನ್, ತಮಗೆ ಹೌಜ್ ಖಝಿ ಪ್ರದೇಶವನ್ನು ಅಯೋಧ್ಯೆಯನ್ನಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ನಾವು ಹೌಝ್ ಖಝಿ, ಬಲ್ಲಿಮಾರನ್ ಅನ್ನು ಅಯೋಧ್ಯೆಯನ್ನಾಗಿ ಪರಿವರ್ತಿಸಬಲ್ಲೆವು. ಹಿಂದುಗಳನ್ನು ಇನ್ನು ಮುಂದೆ ಥಳಿಸಲಾಗದು, ಅವರಿಗೆ ಇದು ಅರ್ಥವಾಗಬೇಕು'' ಎಂದರು.
ಹೌಝ್ ಖಝಿ ಪ್ರದೇಶದಲ್ಲಿ ನಡೆದ ಶೋಭಾಯಾತ್ರೆಯ ಸಂದರ್ಭ ವಿಹಿಂಪದ ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜೈನ್ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ.
“ಇದು ಅಂತಿಮ ಕಾರ್ಯಕ್ರಮವಲ್ಲ, ಮೊದಲ ಕಾರ್ಯಕ್ರಮ. ವಾತಾವರಣ ಉತ್ತಮವಾಗಿದ್ದರೆ ಸರಿ, ಆದರೆ ಏನಾದರೂ ತಪ್ಪು ನಡೆದರೆ ಮತ್ತೆ ಬರುತ್ತೇವೆ ಹಾಗೂ ಸಭೆ ಇದಕ್ಕಿಂತಲೂ ಹತ್ತು ಪಟ್ಟು ಇರುವುದು. ಹಿಂದುಗಳು ಇಲ್ಲಿಂದ ವಲಸೆ ಹೋಗಲು ಯೋಚಿಸುತ್ತಿದ್ದಾರೆಂದು ಕೇಳಿ ಬಂತು. ಹೆದರಬೇಡಿ, ನಾವಿದ್ದೇವೆ, ನಾವು ಇಲ್ಲಿ ಹೋರಾಡುತ್ತೇವೆ ಹಾಗೂ ಅಗತ್ಯ ಬಿದ್ದರೆ ಇಲ್ಲಿ ಸಾಯುತ್ತೇವೆ” ಎಂದು ಘೋಷಿಸಿದರು.
ಮಂಗಳವಾರ ಶೋಭಾಯಾತ್ರೆಯ ಸಂದರ್ಭ ಹೌಝ್ ಖಝಿ ಪ್ರದೇಶಕ್ಕೆ ವಾಹನಗಳನ್ನು ನಿಷೇಧಿಸಲಾಗಿತ್ತಲ್ಲದೆ, ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು. ಕೇಸರಿ ಧ್ವಜಗಳನ್ನು ಕೈಗಳಲ್ಲಿ ಹಿಡಿದ ಹಾಗೂ ಜೈ ಶ್ರೀ ರಾಮ್ ಘೋಷಣೆಗಳನ್ನು ಮೊಳಗಿಸುತ್ತಾ ನೂರಾರು ಜನರು ಆ ರಸ್ತೆಯಲ್ಲಿ ಸಾಗಿದ್ದರು. ಏಳು ಕುದುರೆಗಾಡಿಗಳು ಮೂರ್ತಿಗಳನ್ನು ಸಾಗಿಸಿದ ಮೆರವಣಿಗೆಯಲ್ಲಿತ್ತು. ಮೂರ್ತಿಗಳನ್ನು ದೇವಳಕ್ಕೆ ಸಾಗಿಸಿ ನಂತರ ಅಲ್ಲಿ ಹವನವೂ ನಡೆದಿದೆ.
ಮಂಗಳವಾರ ಈ ಪ್ರದೇಶಕ್ಕೆ ಬಿಜೆಪಿ ಸಂಸದರಾದ ವಿಜಯ್ ಗೋಯೆಲ್, ಹಂಸ್ ರಾಜ್ ಹಂಸ್ ಹಾಗೂ ಮನೋಜ್ ತಿವಾರಿ ಕೂಡ ಭೇಟಿ ನೀಡಿದ್ದರು.