ಮತೀಯ ಘರ್ಷಣೆಗೆ ತಿರುಗಿದ ಪಾರ್ಕಿಂಗ್ ಕಲಹ: ದೇವಳದ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡ ಮುಸ್ಲಿಮರು

Update: 2019-07-10 11:14 GMT

ಹೊಸದಿಲ್ಲಿ, ಜು.10: ಹಳೆ ದಿಲ್ಲಿಯ ಚಾವ್ರಿ ಬಜಾರ್ ಸಮೀಪದ ಲಾಲ್ ಕುವಾ ಪ್ರದೇಶದಲ್ಲಿ ಪಾರ್ಕಿಂಗ್ ವಿವಾದವೊಂದು  ಮತೀಯ ಉದ್ವಿಗ್ನತೆ ಸೃಷ್ಟಿಸಿದ್ದರೂ ಈ ಘಟನೆ ನಡೆದು ಹತ್ತು ದಿನಗಳಲ್ಲಿಯೇ ಅಲ್ಲಿನ ಹಿಂದು ಮತ್ತು ಮುಸ್ಲಿಮರು ಜತೆಯಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ದುಷ್ಕರ್ಮಿಗಳಿಂದ ಹಾನಿಗೊಂಡಿದ್ದ ದುರ್ಗಾ ಮಂದಿರದಲ್ಲಿ ಶುದ್ಧೀಕರಣ ಕಾರ್ಯ ಮತ್ತು ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಗಳು ನಡೆದವು.

ಎರಡೂ ಸಮುದಾಯಗಳಿಗೆ ಸೇರಿದ ಶಾಂತಿ ಸಮಿತಿ ಸದಸ್ಯರು ಎರಡು ಕಿಮೀ ಉದ್ದದ ಮೆರವಣಿಗೆ ಹಾದಿಯಲ್ಲಿ ಭಾಗವಹಿಸಿದ ಜನರಿಗೆ ಆಹಾರ ವಿತರಿಸುತ್ತಿದ್ದುದೂ ಕಂಡು ಬಂತು. ಹೌಝ್ ಖಝಿ ಚೌಕ್ ಪ್ರದೇಶದಿಂದ ಆರಂಭಗೊಂಡ ಮೆರವಣಿಗೆ ದೇವಳವಿರುವ ಲಾಲ್ ಕುವಾ ತನಕ ಸಾಗಿತು. ಬಿಗಿ ಭದ್ರತೆಯ ನಡುವೆ ದೇವಳದಲ್ಲಿ ಎಲ್ಲಾ ಧಾರ್ಮಿಕ ಪ್ರಕ್ರಿಯೆಗಳು ನಡೆದಿವೆ.

ದಿಲ್ಲಿಯ ಸಂಸದರಾದ ಮನೋಜ್ ತಿವಾರಿ ಹಾಗೂ ಹಂಸ್ ರಾಜ್ ಹಂಸ್ ಸಹಿತ ಸಂಘಪರಿವಾರ ಸಂಘಟನೆಗಳ 5,000 ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದರು.

“ಮೆರವಣಿಗೆಯಲ್ಲಿ ಭಾಗವಹಿಸಿದ ನಮ್ಮ ಹಿಂದೂ ಸೋದರ ಸೋದರಿಯರಿಗೆ ನಾವು ಸಹಾಯ ಮಾಡಿದ್ದೇವೆ'' ಎಂದು ಲಾಲ್ ಕುವಾ ಆರ್‍ಡಬ್ಲ್ಯುಎ ಅಧ್ಯಕ್ಷ ಅಬ್ದುಲ್ ಬಾಖಿರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News