5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯ ಹಾದಿ ಅಸ್ಪಷ್ಟ

Update: 2019-07-11 10:27 GMT

ಭಾರತ ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯಾಗುವ ಗುರಿ ಹೊಂದಿದೆ. ಆದರೆ ‘ಟ್ರಿಲಿಯನ್’ ಅಂದರೆ ಎಷ್ಟೆಂದು ಬಹಳ ಮಂದಿಗೆ ಗೊತ್ತಿರಲಾರದು. ಒಂದು ಟ್ರಿಲಿಯನ್ ಒಂದು ಲಕ್ಷ ಕೋಟಿಗೆ ಸಮಾನ. 5ರ ಮುಂದೆ ಹನ್ನೆರಡು ಸಂಖ್ಯೆಗಳನ್ನು ಇಟ್ಟರೆ ಅದು ಟ್ರಿಲಿಯನ್ ಆಗುತ್ತದೆ. ಈ ಗುರಿ ರೂಪಾಯಿಯಲ್ಲಿಲ್ಲ. ಇದು ಇರುವುದು ಡಾಲರ್‌ನಲ್ಲಿ. ಡಾಲರ್ ಎಂಬುದು ಅರ್ಥ ವ್ಯವಸ್ಥೆಗೆ ಜಾಗತಿಕ ಮೈಲುಗಲ್ಲಿನ ಪ್ರತಿಷ್ಠೆ ನೀಡುತ್ತದೆ.

 ಆ ಮೈಲುಗಲ್ಲನ್ನು ತಲುಪಬೇಕಾದರೆ ಮಾಡಬೇಕಾದ ಕೆಲಸ ತುಂಬಾ ಇದೆ. ಇದೆಲ್ಲದರ ಜೊತೆ ಡಾಲರ್-ರೂಪಾಯಿ ಮೌಲ್ಯ ಕುಸಿಯದಂತೆ, ಡಾಲರ್ ಎದುರು ರೂಪಾಯಿ ವೌಲ್ಯ ಕೆಳಗಿಳಿಯದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಹೀಗೇನಾದರೂ ಆದಲ್ಲಿ ಉದಾಹರಣೆಗೆ ರೂಪಾಯಿ ಡಾಲರ್ ಎದುರು ಮೌಲ್ಯ ಶೇ. 20 ಕುಸಿದಲ್ಲಿ, ಆಗ ಅದು ಶೇ. 20ರಷ್ಟು ಜಾಸ್ತಿ ಯಾಗಬೇಕಾಗುತ್ತದೆ. (5ರ ಬದಲು 6 ಟ್ರಿಲಿಯನ್ ಆಗಬೇಕಾಗುತ್ತದೆ.)

ಆದ್ದರಿಂದ ನಾವು ಬಳಸುವ ತಂತ್ರದಲ್ಲಿ ಒಂದು ಮಿಲಿಯ (ಅಥವಾ ಬಿಲಿಯ) ಕೆಲಸಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ರೂಪಾಯಿ-ಡಾಲರ್ ವಿನಿಮಯ ದರದಲ್ಲಿ ತುಲನಾತ್ಮಕವಾಗಿ ತುಂಬಾ ಏರುಪೇರಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ತುಂಬಾ ಮಹತ್ವಾಕಾಂಕ್ಷೆಯ ಗುರಿ. ಯಾಕೆಂದರೆ ಕಳೆದ ಐದು ವರ್ಷಗಳಲ್ಲಿ ಆರ್ಥಿಕವಾಗಿ ನಾವು ಗಾತ್ರದಲ್ಲಿ ಒಂದು ಟ್ರಿಲಿಯನ್ ಡಾಲರ್‌ಗಿಂತಲೂ ಕಡಿಮೆ ಬೆಳವಣಿಗೆ ಕಂಡಿದ್ದೇವೆ.

ಮುಂದಿನ ಐದು ವರ್ಷಗಳಲ್ಲಿ ನಾವು ಕನಿಷ್ಠ ಪಕ್ಷ ಇದಕ್ಕಿಂತ ಎರಡು ಪಟ್ಟು ವೇಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬೆಳೆಯಬೇಕು. ಆರ್ಥಿಕ ಸಮೀಕ್ಷೆಯ ಪ್ರಕಾರ ಈ ಐದರಲ್ಲಿ ಮೊದಲ ವರ್ಷ ಶೇ. 7 ಜಿಡಿಪಿಯ ಬೆಳವಣಿಗೆ ಸಾಧ್ಯವಾದೀತು. ಆದ್ದರಿಂದ ಉಳಿದ ನಾಲ್ಕು ವರ್ಷಗಳಲ್ಲಿ ನಾವು ವೇಗವನ್ನು ಹೆಚ್ಚಿಸಿಕೊಳ್ಳಬೇಕು. ವಾಸ್ತವಿಕವಾಗಿ ವಿತ್ತ ಸಚಿವರು ತನ್ನ ಬಜೆಟ್ ಭಾಷಣದಲ್ಲಿ ಕೆಲವು (ಫ್ಯೂ) ವರ್ಷಗಳಲ್ಲಿ 5 ಟ್ರಿಲಿಯನ್ ಎಂದರೇ ಹೊರತು ‘ಐದು’ (ಫೈವ್) ಎನ್ನಲಿಲ್ಲ. ಆದ್ದರಿಂದ ಅದು ಎಂಟು ಅಥವಾ ಹತ್ತು ವರ್ಷಗಳೂ ಆಗಬಹುದು.

ಈ ನಿಟ್ಟಿನಲ್ಲಿ 2001ರ ಸೆಪ್ಟ್ಟಂಬರ್‌ನಲ್ಲಿ ನಡೆದ ಒಂದು ಘಟನೆಯನ್ನು ಜ್ಞಾಪಿಸಿಕೊಳ್ಳುವುದು ಸೂಕ್ತ. ಜಾಗತಿಕವಾಗಿ ಪ್ರಸಿದ್ಧವಾದ ಬಹುರಾಷ್ಟ್ರೀಯ ಸಮಾಲೋಚನಾ ಕಂಪೆನಿಯೊಂದು ಎರಡಂಕೆಯ ಆರ್ಥಿಕ ಅಭಿವೃದ್ಧಿ ಸಾಧಿಸುವ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಒಂದು ಪ್ರಾತ್ಯಕ್ಷಿಕೆ ತೋರಿಸಿತು. ಪರದೆಯ ಮೇಲೆ ತೋರಿಸಲಾದ ಅಂಕಿ ಸಂಖ್ಯೆಗಳು, ಚಿತ್ರಗಳು ಎಲ್ಲವೂ ಅದ್ಭುತವಾಗಿದ್ದವು. ಅಭಿವೃದ್ಧಿ ಹೊಂದಿದ ಒಂದು ಅರ್ಥ ವ್ಯವಸ್ಥೆಯ ಕಡೆಗೆ ಕೊಂಡೊಯ್ಯುವ ಶೇ. 10 ಆರ್ಥಿಕ ಬೆಳವಣಿಗೆಯ ದರ್ಶನ (ವಿಶನ್) ತುಂಬಾ ಆಕರ್ಷಕವೂ ಆಗಿತ್ತು.

 ಆ ಪವರ್‌ಪಾಯಿಂಟ್ ಪ್ರಾತ್ಯಕ್ಷಿಕೆ ಉದ್ದಕ್ಕೂ ಪ್ರಧಾನಿಯವರು ತಾಳ್ಮೆಯಿಂದ ಕುಳಿತು ಎಲ್ಲವನ್ನೂ ಕೇಳಿಸಿಕೊಂಡರು. ಕೊನೆಗೆ ಅವರು ಮುಗುಳ್ನಕ್ಕು ಕೇಳಿದರು, ‘‘ಪರ್ ಯೇ ಸಬ್ ಹೋಗಾ ಕೈಸೆ?’’ (ಆದರೆ ನಾವು ಅದನ್ನು ಸಾಧಿಸುವುದು, ಆ ಗುರಿ ತಲುಪುವುದು ಹೇಗೆ?) 5 ಟ್ರಿಲಿಯನ್ ಡಾಲರ್ ಗುರಿಯ ಬಗ್ಗೆ ಕೂಡ ಇದೇ ಪ್ರಶ್ನೆಯನ್ನು ಕೇಳಬಹುದು.

ವಿತ್ತ ಸಚಿವರ ಬಜೆಟ್ ಪ್ರಸ್ತಾವಗಳಲ್ಲಿ ರಸ್ತೆಗಳ ನಿರ್ಮಾಣ, ಸಾಗರ್‌ಮಾಲಾ, (ಅನೇಕ ಬಂದರುಗಳ ನಡುವೆ ಸಂಪರ್ಕಿಸುವುದು) ರೈಲ್ವೆ ಮತ್ತು ವಿಮಾನ ಮಾರ್ಗಗಳು, ಅನಿಲ ಮತ್ತು ವಿದ್ಯುತ್‌ಗೆ ರಾಷ್ಟ್ರೀಯ ವ್ಯವಸ್ಥೆ ಇತ್ಯಾದಿಗಳಿವೆ ಈ ಎಲ್ಲ ಮೂಲ ಚೌಕಟ್ಟುಗಳು ಖಂಡಿತವಾಗಿಯೂ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.

ಆದರೆ ಬಜೆಟ್‌ನಲ್ಲಿ ಮಾಡಲಾಗಿರುವ ಒಟ್ಟು ಬಂಡವಾಳ ಹೂಡಿಕೆಯನ್ನು ಗಮನಿಸಿದರೆ, ಅದು ನಿಜವಾಗಿ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮೂಲ ಚೌಕಟ್ಟುಗಳಿಗೆ ಸರಕಾರದ ಕೊಡುಗೆ (2017-18ರಲ್ಲಿ) ಶೇ. 5.2ರಿಂದ 4.6ಕ್ಕೆ (2018-19ರಲ್ಲಿ) ಇಳಿದಿದೆ. ಆದ್ದರಿಂದ ಖಾಸಗಿ ರಂಗದ ಹೂಡಿಕೆ ಹರಿದು ಬಂದಲ್ಲಿ ಮಾತ್ರ ನಿರೀಕ್ಷಿತ ಆರ್ಥಿಕ ಬೆಳವಣಿಗೆಗೆ ಸಾಧ್ಯ ಎಂದು ಹೇಳಬಹುದು.

ಆದರೆ ಹಲವು ವರ್ಷಗಳಿಂದ ಈ ಹೂಡಿಕೆಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಆದ್ದರಿಂದ ನಾವು ಸಾಕಷ್ಟು ವೇಗವಾಗಿ ಸಾಗಿ 5 ಟ್ರಿಲಿಯನ್ ಡಾಲರ್ ಗುರಿತಲುಪಲು ಎದುರಾಗುವ ಅತ್ಯಂತ ದೊಡ್ಡ ಸವಾಲು ಈ ಹೂಡಿಕೆಯೇ ಆಗಿದೆ.
ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಸರಕಾರ ನೀಡುವ 70,000 ಕೋಟಿ ರೂಪಾಯಿಯ ಬಂಡವಾಳದ ಒಳಹರಿವು ಈ ನಿಟ್ಟಿನಲ್ಲಿ ಸಹಕಾರಿಯಾದೀತು. ಹಾಗೆಯೇ ಒಟ್ಟು 400 ಕೋಟಿ ರೂಪಾಯಿಗಿಂತ ಕಡಿಮೆ ವ್ಯವಹಾರವಿರುವ ಎಲ್ಲ ಕಂಪೆನಿಗಳಿಗೆ ಶೇಕಡ ಇಪ್ಪತ್ತೈದು ಆದಾಯ ತೆರಿಗೆ ವಿಧಿಸುವ ಕಡಿಮೆ ಆದಾಯ ತೆರಿಗೆ ಕ್ರಮ ಕೂಡ ಈಗ ತುಂಬಾ ಅವಶ್ಯಕವಾಗಿರುವ ಒಂದು ಹೆಜ್ಜೆಯಾಗಿದೆ.

5 ಟ್ರಿಲಿಯನ್ ಡಾಲರ್‌ಗೆ ಸಾಗುವ ಹಾದಿಯನ್ನು ಇನ್ನೂ ಚಿಕ್ಕ ಚಿಕ್ಕದಾದ ಮತ್ತು ತಕ್ಷ್ಷಣದ ಮೈಲುಗಲ್ಲುಗಳಿರುವ ಹಾದಿಯಾಗಿ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಪ್ರತಿಯೊಂದು ರಂಗದ ಗುರಿಗಳನ್ನು ಹಾಕಿಕೊಳ್ಳಬೇಕು; ಆದರೆ ಇದು ಕೇಂದ್ರೀಯ ಯೋಜನೆ ಎಂಬ ಅರ್ಥದಲ್ಲಿ ಅಲ್ಲ.

ಉದಾಹರಣೆಗೆ, ಭಾರತವು ಹೇಗೆ ಉಡುಪುಗಳ ಒಂದು ಪ್ರಮುಖ ರಫ್ತುದಾರನಾಗಿ ತನ್ನ ಸ್ಥಾನವನ್ನು ಪುನಃ ಪಡೆಯಬಹುದು? ಈಗ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಕೂಡ ಈ ರಂಗದಲ್ಲಿ ನಮಗಿಂತ ಮುಂದಿವೆ. ರಫ್ತುಗಳನ್ನು ಹೆಚ್ಚು ಮಾಡುವಂತೆ ಆಗ್ರೋ- ಪ್ರೋಸೆಸಿಂಗ್ ಉದ್ಯಮಕ್ಕೆ ಹೇಗೆ ಪುನರ್ಜೀವ ತುಂಬಬಹುದು? ನಾವು ಹೇಗೆ ಚರ್ಮ ಕೈಗಾರಿಕೆಯನ್ನು ಪುನಶ್ಚೇತನಗೊಳಿಸಬಹುದು? ನಾವು ಹೇಗೆ ಕನಿಷ್ಠ ಒಂದು ಮಿಲಿಯ ಚೀನೀ ಪ್ರವಾಸಿಗರನ್ನು ಆಕರ್ಷಿಸಬಹುದು? ಗಣಿಗಾರಿಕೆ, ರಾಸಾಯನಿಕಗಳು, ಲೋಹಗಳು, ವಾಹನಗಳು ಮತ್ತು ಇತರ ಉತ್ಪಾದನಾ ಕ್ಷೇತ್ರಗಳಲ್ಲಿ ನಾವು ಹೇಗೆ ಕನಿಷ್ಠ ಒಂದು ಬಿಲಿಯ ಡಾಲರ್‌ನ ಖಾಸಗಿ ರಂಗದ ಹಸಿರು ಗದ್ದೆ (ಗ್ರೀನ್ ಫೀಲ್ಡ್) ಯೋಜನೆಗಳನ್ನು ಸಾಧ್ಯವಾಗಿಸಬಹುದು?
ಪ್ರಾಯಶಃ ಇದೆಲ್ಲ ನೀತಿ ಆಯೋಗದ ಮುಂದಿರುವ ಕೆಲಸ. ಬಜೆಟ್ ಎಷ್ಟೆಂದರೂ ಖಾತೆಗಳು ಮತ್ತು ವಿಶ್ವಾಸಾರ್ಹ ನೀಲ ನಕಾಶೆಗಳು ಒಂದು ವಿವರ. ನಮಗೆ 5 ಟ್ರಿಲಿಯನ್ ಡಾಲರ್‌ನ ರಸ್ತೆ ನಕಾಶೆಯ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಾಗಿದೆ.


ಕೃಪೆ: ಡೆಕ್ಕನ್ ಹೆರಾಲ್ಡ್ 

Writer - ಅಜಿತ್ ರಾನಡೆ

contributor

Editor - ಅಜಿತ್ ರಾನಡೆ

contributor

Similar News