2027ರ ವೇಳೆಗೆ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯ ದೇಶ ಯಾವುದು ಗೊತ್ತೇ ?

Update: 2019-07-11 03:31 GMT

ಹೊಸದಿಲ್ಲಿ: ಮುಂದಿನ ಮೂರು ದಶಕಗಳಲ್ಲಿ ಭಾರತ ಹಾಗೂ ನೈಜೀರಿಯಾ ಅತಿಹೆಚ್ಚು ಜನಸಂಖ್ಯಾ ಬೆಳವಣಿಗೆ ಹೊಂದುವ ದೇಶಗಳಾಗಿ ಮುಂದುವರಿಯಲಿವೆ.

ಭಾರತ ಈ ಅವಧಿಯಲ್ಲಿ 273 ದಶಲಕ್ಷ ಜನಸಂಖ್ಯೆಯನ್ನು ಹೆಚ್ಚುವರಿಯಾಗಿ ಹೊಂದಿದರೆ, ನೈಜೀರಿಯಾ ತನ್ನ ಒಟ್ಟು ಜನಸಂಖ್ಯೆಗೆ 20 ಕೋಟಿ ಸೇರಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ಸಾಧ್ಯತೆ ವರದಿ ಬಹಿರಂಗಪಡಿಸಿದೆ.

ಚೀನಾವನ್ನು ಹಿಂದಿಕ್ಕಿ 2027ರ ವೇಳೆಗೆ ಭಾರತ, ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಲಿದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ 200 ಕೋಟಿ ಹೆಚ್ಚಿ, 7.7 ಶತಕೋಟಿಯಿಂದ 9.7 ಶತಕೋಟಿ ಆಗಲಿದೆ ಎಂದು ವರದಿ ಅಂದಾಜಿಸಿದೆ.

ಮುಂದಿನ ಮೂರು ದಶಕಗಳಲ್ಲಿ ಭಾರತದಲ್ಲಿ ಪ್ರತಿ ಮಹಿಳೆಗೆ ಎರಡು ಅಥವಾ ಎರಡಕ್ಕಿಂತ ಕಡಿಮೆ ಮಕ್ಕಳು ಜನಿಸಿದರೂ, ಹೆಚ್ಚಿನ ಸಂಖ್ಯೆಯ ಯುವಜನರು ಉತ್ಪಾದಕ ವಯಸ್ಸಿನ ಹಂತ ತಲುಪುವುದರಿಂದ ದೇಶದಲ್ಲಿ ಜನಸಂಖ್ಯಾ ಪ್ರಗತಿಗೆ ವೇಗ ಸಿಗಲಿದೆ. ನೈಜೀರಿಯಾದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದುವುದರಿಂದ ಜನಸಂಖ್ಯಾ ಸ್ಫೋಟವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.

ಭಾರತದ ಒಟ್ಟು ಫಲವತ್ತತೆ ದರ 2.2 ಆಗಿದ್ದು, 24 ರಾಜ್ಯಗಳಲ್ಲಿ ಅರ್ಧದಷ್ಟು ಜನಸಂಖ್ಯೆಯ ಫಲವತ್ತತೆ ದರ 2.1 ಅಥವಾ ಅದಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಆದರೆ ನೈಜೀರಿಯಾದಲ್ಲಿ ಫಲವತ್ತತೆ ದರ 5.4 ಇದೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News