ನಟಿ ಶ್ರೀದೇವಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಡಿಜಿಪಿಯ ಸ್ಫೋಟಕ ಹೇಳಿಕೆ!

Update: 2019-07-12 10:43 GMT

ತಿರುವನಂತಪುರಂ, ಜು.12: ಬಹುಭಾಷಾ ನಟಿ ಶ್ರೀದೇವಿ ದುಬೈಯ ಹೋಟೆಲ್ ಒಂದರ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿ ಒಂದು ವರ್ಷಕ್ಕೂ ಮೇಲಾಗಿದೆ. ಫೆಬ್ರವರಿ 24, 2018ರಂದು ನಡೆದ ಈ ಘಟನೆ ಶ್ರೀದೇವಿ ಅಭಿಮಾನಿಗಳಿಗಷ್ಟೇ ಅಲ್ಲ ಇಡೀ ದೇಶಕ್ಕೇ ಆಘಾತವುಂಟು ಮಾಡಿತ್ತು.

ದುಬೈಯಿಂದ ಶ್ರೀದೇವಿಯವರ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಆದ ವಿಳಂಬವೂ ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದರೂ, ಶ್ರೀದೇವಿ ಅಂತ್ಯಕ್ರಿಯೆಯ ನಂತರ ಅವೆಲ್ಲವೂ ತಣ್ಣಗಾಗಿದ್ದವು. ಇದೀಗ ಕೇರಳ ಡಿಜಿಪಿ (ಬಂದೀಖಾನೆ) ರಿಷಿರಾಜ್ ಸಿಂಗ್ ಅವರು ಕೇರಳ ‘ಕೌಮುದಿ’ ಪತ್ರಿಕೆಗೆ ಬರೆದ ಅಂಕಣದಲ್ಲಿ ಎತ್ತಿರುವ ವಿಚಾರ ಸುದ್ದಿಗೆ ಗ್ರಾಸವಾಗಿದೆ. “ಶ್ರೀದೇವಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯಿಲ್ಲ” ಎಂದು ಅವರು ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

ತಾವು ಈ ರೀತಿಯ ಅಭಿಪ್ರಾಯಕ್ಕೆ ಬರಲು ತಮ್ಮ ಸ್ನೇಹಿತ ಹಾಗೂ ಫೊರೆನ್ಸಿಕ್ ತಜ್ಞ ಡಾ. ಉಮಾದಾತನ್ ಅವರೊಡನೆ ಕುತೂಹಲದಿಂದ ಈ ಕುರಿತಂತೆ ನಡೆಸಿದ ಸಂವಾದ ಕಾರಣ ಎಂದು ಸಿಂಗ್ ಬರೆದಿದ್ದಾರೆ. ಆದರೆ ಇದನ್ನು ದೃಢಪಡಿಸಲು ಸಿಂಗ್ ಅವರ ಸ್ನೇಹಿತ ಡಾ. ಉಮಾದಾತನ್ ಈಗ ಬದುಕಿಲ್ಲ.

“ಶ್ರೀದೇವಿ ಸಾವು ಆಕಸ್ಮಿಕವಲ್ಲ ಬದಲಾಗಿ ಅದು ಕೊಲೆಯಾಗಿರಬಹುದು ಎಂದು ನನ್ನ ಸ್ನೇಹಿತ ಹಾಗೂ ದಿವಂಗತ ಫೊರೆನ್ಸಿಕ್ ತಜ್ಞ ಡಾ. ಉಮದಾತನ್ ನನಗೆ ಬಹಳ ಸಮಯದ ಹಿಂದೆ ಹೇಳಿದ್ದರು. ಶ್ರೀದೇವಿಯ ಸಾವಿನ ಬಗ್ಗೆ ಕುತೂಹಲದಿಂದ ನಾನು ಅವರನ್ನು ಕೇಳಿದಾಗ ಅವರು ಹೀಗೆಂದಿದ್ದರು” ಎಂದು ಸಿಂಗ್ ಬರೆದಿದ್ದಾರೆ.

“ಅವರು ತಮ್ಮ ಹೇಳಿಕೆ ದೃಢೀಕರಿಸಲು ಕೆಲವೊಂದು ವಿಚಾರಗಳನ್ನೂ ಹೇಳಿದ್ದರು. ಅವರ ಪ್ರಕಾರ ಒಂದು ಅಡಿ ಆಳದ ನೀರಿರುವ ತೊಟ್ಟಿಯಲ್ಲಿ ಯಾರೂ ಎಷ್ಟೇ ಮದ್ಯ ಸೇವಿಸಿದ್ದರೂ ಮುಳುಗಲು ಸಾಧ್ಯವಿಲ್ಲ. ಯಾರಾದರೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದು  ತಲೆಯನ್ನು ನೀರಿನೊಳಗೆ ಒತ್ತಿ ಹಿಡಿದರೆ ಮಾತ್ರ ಮುಳುಗಿ ಸಾಯಬಹುದು ಎಂದಿದ್ದರು” ಎಂದು ಐಪಿಎಸ್ ಅಧಿಕಾರಿ ಸಿಂಗ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News