ಗುರು ನಾನಕ್‌ರ 550ನೇ ಜನ್ಮ ದಿನಾಚರಣೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಆಹ್ವಾನ

Update: 2019-07-12 17:34 GMT

ಅಮೃತಸರ,ಜು.12: ಭಾರತದಲ್ಲಿ ಸಿಕ್ಖರ ಪರಮೋಚ್ಚ ಮಂಡಳಿಯಾಗಿರುವ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿ(ಎಸ್‌ಜಿಪಿಸಿ)ಯು ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆಯ ಅಂಗವಾಗಿ ಜು.25ರಂದು ಪಾಕಿಸ್ತಾನದ ನಾನಕಾನಾ ಸಾಹಿಬ್‌ನಿಂದ ಆರಂಭಗೊಳ್ಳಲಿರುವ ಭವ್ಯ ನಗರ ಕೀರ್ತನ್(ಧಾರ್ಮಿಕ ಮೆರವಣಿಗೆ)ನಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸಿದೆ.

ಪಾಕಿಸ್ತಾನದಲ್ಲಿ ನಡೆಯಲಿರುವ ನಗರ ಕೀರ್ತನ್‌ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ರಾಜ್ಯಪಾಲ ವಿ.ಪಿ.ಸಿಂಗ್ ಬದ್ನೋರೆ ಅವರನ್ನೂ ಆಹ್ವಾನಿಸಲಾಗಿದೆ ಎಂದು ಎಸ್‌ಜಿಪಿಸಿ ಅಧ್ಯಕ್ಷ ಗೋಬಿಂದ ಸಿಂಗ್ ಲೋಂಗೊವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಜು.25ರಂದು ಪವಿತ್ರ ಸಮಾರಂಭದ ನಂತರ ಗುರು ನಾನಕ್‌ರ ಜನ್ಮಸ್ಥಳವಾದ ನಾನಕಾನಾ ಸಾಹಿಬ್‌ನಿಂದ 100 ದಿನಗಳ ನಗರ ಕೀರ್ತನ್ ಆರಂಭಗೊಳ್ಳಲಿದೆ. ಪ್ರತಿಷ್ಠಿತ ಧಾರ್ಮಿಕ ಮುಖಂಡರು ಸೇರಿದಂತೆ 550 ಭಕ್ತರು ಪವಿತ್ರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ. ನಗರ ಕೀರ್ತನ್ ಅಟ್ಟಾರಿ-ವಾಘಾ ಗಡಿಗೆ ಬಂದಾಗ ಅಮರಿಂದರ್ ಸಿಂಗ ಮತ್ತು ಮಾಜಿ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಅವರು ಭಕ್ತರನ್ನು ಸ್ವಾಗತಿಸಲಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಸಿಕ್ಖರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News