ವಿಶ್ವ ಬ್ಯಾಂಕ್‌ನ ನೂತನ ವ್ಯವಸ್ಥಾಪನಾ ನಿರ್ದೇಶಕಿ, ಸಿಎಫ್‌ಒ ಆಗಿ ಅಂಶುಲಾ ಕಾಂತ್

Update: 2019-07-12 17:47 GMT

ಹೊಸದಿಲ್ಲಿ, ಜು.12: ಭಾರತೀಯ ಸ್ಟೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಅಂಶುಲಾ ಕಾಂತ್ ಅವರನ್ನು ವಿಶ್ವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಆರ್ಥಿಕ ಅಧಿಕಾರಿ (ಸಿಎಫ್‌ಒ) ಆಗಿ ನೇಮಕ ಮಾಡಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಲ್ಪಸ್ ಶುಕ್ರವಾರ ತಿಳಿಸಿದ್ದಾರೆ.

ಎಸ್‌ಬಿಐ ಸಿಎಫ್‌ಒ ಆಗಿ ಅಂಶುಲಾ ಅವರು 38 ಬಿಲಿಯನ್ ಡಾಲರ್ ಆದಾಯ ಮತ್ತು ಒಟ್ಟು 500 ಬಿಲಿಯನ್ ಡಾಲರ್ ಆಸ್ತಿಯನ್ನು ನಿಭಾಯಿಸಿದ್ದರು. ಸಂಸ್ಥೆಯನ್ನು ಪ್ರಬುದ್ಧವಾಗಿ ಮುನ್ನಡೆಸಿರುವ ಅವರು, ಬಂಡವಾಳ ಮೂಲವನ್ನು ಸುಧಾರಿಸಿದ್ದರು ಮತ್ತು ತನ್ನ ಅಧಿಕಾರದ ವ್ಯಾಪ್ತಿಯಲ್ಲಿದ್ದು, ಎಸ್‌ಬಿಐಯ ದೀರ್ಘಕಾಲೀನ ಸಾಮರ್ಥ್ಯದ ಮೇಲೆ ಗಮನಹರಿಸಿದ್ದರು. ಅಂಶುಲಾ 2018ರ ಸೆಪ್ಟೆಂಬರ್‌ನಿಂದ ವ್ಯವಸ್ಥಾಪನಾ ನಿರ್ದೇಶಕ ಮತ್ತು ಮಂಡಳಿ ಸದಸ್ಯರಾಗಿದ್ದರು ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಅಂಶುಲಾ ಅವರ ನೇಮಕದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಲ್ಪಸ್, ವಿಶ್ವ ಬ್ಯಾಂಕ್ ಸಮೂಹದ ವ್ಯವಸ್ಥಾಪನಾ ನಿರ್ದೇಶಕಿ ಮತ್ತು ಸಿಎಫ್‌ಒ ಆಗಿ ಅಂಶುಲಾ ಕಾಂತ್ ಅವರನ್ನು ನೇಮಕ ಮಾಡಿರುವುದು ಖುಷಿ ನೀಡಿದೆ. ಎಸ್‌ಬಿಐ ಸಿಎಫ್‌ಒ ಆಗಿ ವಿತ್ತೀಯ, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನದ ಆವಿಷ್ಕಾರಿ ಬಳಕೆಯ 35 ವರ್ಷಗಳ ಅನುಭವವನ್ನು ಅವರು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇತರ ಹೊಣೆಗಾರಿಕೆಗಳ ಜೊತೆಗೆ, ಅಂಶುಲಾ ಅವರು ವಿತ್ತೀಯ ವರದಿಯ ಮೇಲುಸ್ತುವಾರಿ, ಅಪಾಯದ ನಿರ್ವಹಣೆ ಮತ್ತು ಐಡಿಎ ಮತ್ತು ಇತರ ಆರ್ಥಿಕ ಸಂಪನ್ಮೂಲಗಳ ಬಳಕೆಯ ವಿಷಯದಲ್ಲಿ ವಿಶ್ವಬ್ಯಾಂಕ್‌ನ ಸಿಇಒ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಸ್‌ಬಿಐಯಲ್ಲಿ ಅಪಾಯ, ಅನುಸರಣೆ ಮತ್ತು ಸುಸ್ತಿ ಸಾಲಗಳಿಗೆ ನೇರ ಜವಾಬ್ದಾರಿ ಹೊಂದಿದ್ದ ಅಂಶುಲಾ ಅವರು ಬ್ಯಾಂಕ್‌ನಾದ್ಯಂತ ಸಂಕಷ್ಟ ನಿಬಾವಣೆಯನ್ನು ಸಬಲಗೊಳಿಸುತ್ತಲೇ ಹೂಡಿಕೆಗೆ ಅವಕಾಶಗಳನ್ನು ಸೃಷ್ಟಿಸಿದ್ದರು.

ಅವರು ಲೇಡಿ ಶ್ರೀರಾಮ ಮಹಿಳಾ ಕಾಲೇಜಿನಲ್ಲಿ ಆರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರೆ ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News