ಚೊಚ್ಚಲ ಪ್ರಶಸ್ತಿಗಾಗಿ 44 ವರ್ಷದಿಂದ ಕಾಯುತ್ತಿರುವ ಆಂಗ್ಲರು

Update: 2019-07-12 18:59 GMT

ಲಂಡನ್, ಜು.12: ಜಗತ್ತಿಗೆ ಕ್ರಿಕೆಟ್‌ನ್ನು ಕಲಿಸಿಕೊಟ್ಟ ಇಂಗ್ಲೆಂಡ್ ಕಳೆದ 44 ವರ್ಷಗಳಲ್ಲಿ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಮೂರು ಬಾರಿ ವಿಶ್ವಕಪ್ ಕಿರೀಟ ಧರಿಸುವಲ್ಲಿ ವಿಫಲವಾಗಿರುವ ಇಂಗ್ಲೆಂಡ್ ಇದೀಗ ನಾಲ್ಕನೇ ಬಾರಿ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಪ್ರಯತ್ನ ನಡೆಸಲಿದೆ.

 ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಇಂಗ್ಲೆಂಡ್ ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಇಂಗ್ಲೆಂಡ್ ತಂಡ ಆ ಬಳಿಕ ನಾಲ್ಕು ವರ್ಷಗಳಲ್ಲಿ ಚೇತರಿಸಿಕೊಂಡು ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು.

ನಂ.1 ತಂಡವಾಗಿದ್ದ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲಿದೆ ಎಂದು ಕೂಟದಲ್ಲಿ ಭಾಗವಹಿಸಿದ್ದ ಬಹುತೇಕ ತಂಡಗಳ ನಾಯಕರು ಅಭಿಪ್ರಾಯಪಟ್ಟಿದ್ದರು. ಆದರೆ ಲೀಗ್ ಹಂತದ ಮಧ್ಯದಲ್ಲಿ ಇಂಗ್ಲೆಂಡ್ ತಂಡ 3 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 104 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಅಭಿಯಾನ ಆರಂಭಿಸಿದ್ದ ಇಂಗ್ಲೆಂಡ್ ಆ ಬಳಿಕ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 14 ರನ್‌ಗಳ ಸೋಲು ಅನುಭವಿಸಿತ್ತು. ಬಳಿಕ ಬಾಂಗ್ಲಾದೇಶ ವೆಸ್ಟ್‌ಇಂಡೀಸ್ ಹಾಗೂ ಅಫ್ಘಾನಿಸ್ತಾನ ವಿರುದ್ಧ ಜಯ ಗಳಿಸಿತ್ತು. ಶ್ರೀಲಂಕಾ ಮತ್ತು ಆಸ್ಟ್ರೇಲಿಯದ ವಿರುದ್ಧ ಸೋಲಿನ ಆಘಾತ ಅನುಭವಿಸಿತ್ತು. ಅಂತಿಮವಾಗಿ ಭಾರತ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ ಜಯ ಗಳಿಸಿ ಕೂಟದಲ್ಲಿ ಮೂರನೇ ಸ್ಥಾನದೊಂದಿಗೆ ಸೆಮಿಫೈನಲ್‌ನಲ್ಲಿ ಅವಕಾಶ ಪಡೆಯಿತು.

ಸೆಮಿಫೈನಲ್‌ನಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ನು ಹೊರದಬ್ಬಿರುವ ಇಂಗ್ಲೆಂಡ್‌ಗೆ ಕಿವೀಸ್ ಸವಾಲು ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News