×
Ad

ದ್ವೇಷಾಪರಾಧಗಳು, ಅಸಹಿಷ್ಣುತೆಯಿಂದ ಆರ್ಥಿಕ ಪ್ರಗತಿಗೆ ಗಂಭೀರ ಹಾನಿ: ಖ್ಯಾತ ಕೈಗಾರಿಕೋದ್ಯಮಿ ಆದಿ ಗೋದ್ರೆಜ್ ಆತಂಕ

Update: 2019-07-13 19:58 IST

 ಮುಂಬೈ,ಜು.13: ಹೆಚ್ಚುತ್ತಿರುವ ದ್ವೇಷಾಪರಾಧಗಳು, ಸಾಮಾಜಿಕ ಅಸ್ಥಿರತೆ, ಮಹಿಳೆಯರ ವಿರುದ್ಧ ಹಿಂಸೆ, ಅಸಹಿಷ್ಣುತೆ, ಜಾತಿ ಮತ್ತು ಧರ್ಮಾಧಾರಿತ ಹಿಂಸಾಚಾರ ಹಾಗೂ ಅನೈತಿಕ ಪೊಲೀಸ್‌ ಗಿರಿ ದೇಶದ ಆರ್ಥಿಕ ಪ್ರಗತಿಗೆ ಗಂಭೀರ ಹಾನಿಯನ್ನುಂಟು ಮಾಡಬಲ್ಲವು ಎಂದು ಖ್ಯಾತ ಕೈಗಾರಿಕೋದ್ಯಮಿ ಆದಿ ಗೋದ್ರೆಜ್ ಅವರು ಶನಿವಾರ ಇಲ್ಲಿ ಎಚ್ಚರಿಕೆ ನೀಡಿದರು.

ಆದರೆ,ತನ್ನ ಎರಡನೇ ಅಧಿಕಾರಾವಧಿಯಲ್ಲಿ ನವ ಭಾರತದ ನಿರ್ಮಾಣಕ್ಕಾಗಿ ಮತ್ತು ದೇಶದ ಆರ್ಥಿಕತೆಯನ್ನು ಐದು ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಿಸಲು ‘ಭವ್ಯ ನೋಟ’ವೊಂದನ್ನು ಮಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋದ್ರೆಜ್ ಅಭಿನಂದಿಸಿದರು.

ಇದೇ ವೇಳೆ,ದೇಶದಲ್ಲಿ ಎಲ್ಲವೂ ಸರಿಯಿಲ್ಲ ಎಂದ ಅವರು ಸಾಮಾಜಿಕ ರಂಗ ಕುರಿತು ಹಲವಾರು ಕಳವಳಗಳನ್ನು ಬೆಟ್ಟು ಮಾಡಿದರು. ಬೆಳವಣಿಗೆಯ ಮೇಲೆ ಅವುಗಳ ಪರಿಣಾಮದ ಬಗ್ಗೆ ಅವರು ಎಚ್ಚರಿಕೆ ನೀಡಿದರು.

ತಾನು ಕಲಿತಿದ್ದ ಸೇಂಟ್ ಝೇವಿಯರ್ ಕಾಲೇಜಿನ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಈಗಿನ ಚಿತ್ರಣ ಎಲ್ಲವೂ ಸುಂದರವಾಗಿಲ್ಲ. ನಮ್ಮ ದೇಶವನ್ನು ಕಾಡುತ್ತಿರುವ ಬೃಹತ್ ಬಡತನವು ಬೆಳವಣಿಗೆಯ ವೇಗಕ್ಕೆ ಗಂಭೀರ ಹಾನಿಯನ್ನುಂಟು ಮಾಡಬಲ್ಲದು ಮತ್ತು ನಾವು ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವುದನ್ನು ತಡೆಯಬಲ್ಲದು ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ನಿರುದ್ಯೋಗ ದರವು ಶೇ.6.1ರಷ್ಟಿದ್ದು,ಇದು ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಹೆಚ್ಚಿನದಾಗಿದೆ ಮತ್ತು ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಬೃಹತ್ತಾಗಿ ಕಾಡುತ್ತಿರುವ ನೀರಿನ ಬಿಕ್ಕಟ್ಟು,ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್‌ನ ಹೆಚ್ಚುತ್ತಿರುವ ಬಳಕೆ ಮತ್ತು ಕುಂಠಿತಗೊಳ್ಳುತ್ತಿರುವ ವೈದ್ಯಕೀಯ ಸೌಲಭ್ಯಗಳು ಇವೆಲ್ಲ ಸಮರೋಪಾದಿಯಲ್ಲಿ ಬಗೆಹರಿಸಬೇಕಿರುವ ಇತರ ಕಳವಳಗಳಾಗಿವೆ ಎಂದರು.

ಹಲವಾರು ಸಮಸ್ಯೆಗಳನ್ನು ಮೂಲದಲ್ಲಿಯೇ ಬಗೆಹರಿಸಬೇಕು ಎಂದ ಅವರು,ಹಾಗೆ ಮಾಡದಿದ್ದರೆ ದೇಶವು ತನ್ನ ನಿಜವಾದ ಪ್ರಗತಿ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News