ಪಾಕಿಸ್ತಾನ ಸೇನೆಯ ಯಾವುದೇ ದುಸ್ಸಾಹಸಕ್ಕೆ ಸೂಕ್ತ ಉತ್ತರ: ಜ.ರಾವತ್
ಹೊಸದಿಲ್ಲಿ,ಜು.13: ಪಾಕಿಸ್ತಾನ ಸೇನೆಯಿಂದ ಯಾವುದೇ ದುಸ್ಸಾಹಸವನ್ನು ಸೂಕ್ತ ಉತ್ತರದೊಂದಿಗೆ ಹಿಮ್ಮೆಟ್ಟಿಸಲಾಗುವುದು ಮತ್ತು ಯಾವುದೇ ಭಯೋತ್ಪಾದಕ ಕೃತ್ಯವು ದಂಡನೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶನಿವಾರ ಇಲ್ಲಿ ಹೇಳಿದರು.
‘ಕಾರ್ಗಿಲ್ ಸಂಘರ್ಷದ ನಂತರದ 20 ವರ್ಷಗಳು’ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನ ಸೇನೆಯು ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ಅಥವಾ ನುಸುಳುವಿಕೆಗಳ ಮೂಲಕ ಆಗಾಗ್ಗೆ ದುಸ್ಸಾಹಸಗಳನ್ನು ಮಾಡುತ್ತಲೇ ಬಂದಿದೆ. ಭಾರತೀಯ ಸಶಸ್ತ್ರ ಪಡೆಗಳು ದೃಢಸಂಕಲ್ಪವನ್ನು ಹೊಂದಿವೆ ಮತ್ತು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸನ್ನದ್ಧವಾಗಿವೆ. ಯಾವುದೇ ದುಸ್ಸಾಹಸಕ್ಕೆ ಸೂಕ್ತ ಉತ್ತರವನ್ನು ನೀಡಲಾಗುವುದು. ಅದರಲ್ಲಿ ಯಾವುದೇ ಶಂಕೆ ಬೇಡ ಎಂದರು.
ಸೈಬರ್ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಾಧನೆಗಳ ಸೇರ್ಪಡೆಯು ಯುದ್ಧರಂಗದ ಚಿತ್ರಣವನ್ನು ಬದಲಿಸಿದೆ ಎಂದೂ ಅವರು ಹೇಳಿದರು.
ಯಾವುದೇ ಭಯೋತ್ಪಾದಕ ಕೃತ್ಯವು ದಂಡನೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಜ.ರಾವತ್, ಸರ್ಜಿಕಲ್ ದಾಳಿಗಳು ಮತ್ತು ಬಾಲಾಕೋಟ್ ವಾಯುದಾಳಿಗಳು ಭಯೋತ್ಪಾದನೆಯ ವಿರುದ್ಧ ನಮ್ಮ ರಾಜಕೀಯ ಮತ್ತು ಮಿಲಿಟರಿ ದೃಢನಿರ್ಣಯಗಳನ್ನು ಸ್ಪಷ್ಟವಾಗಿ ತೋರಿಸಿವೆ ಎಂದರು.