ಗುಂಪು ಹಲ್ಲೆ – ಹತ್ಯೆ ನಿಗ್ರಹಕ್ಕೆ ರಾಷ್ಟ್ರವ್ಯಾಪಿ ಕಾನೂನು: ಮಯಾವತಿ ಆಗ್ರಹ

Update: 2019-07-13 17:14 GMT

ಲಕ್ನೋ, ಜು. 13: ಗುಂಪಿನಿಂದ ಹಲ್ಲೆ-ಹತ್ಯೆ ವಿರುದ್ಧ ಉತ್ತರಪ್ರದೇಶ ಕಾನೂನು ಆಯೋಗ ಸಲ್ಲಿಸಿದ ಕರಡು ಮಸೂದೆಯನ್ನು ಶನಿವಾರ ಸ್ವಾಗತಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಈ ‘ಮಾರಣಾಂತಿಕ ಕಾಯಿಲೆ’ ಹರಡುವವರನ್ನು ಬಂಧಿಸಲು ದೇಶವ್ಯಾಪಿ ಕಠಿಣ ಶಾಸನ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

ಬಿಎಸ್‌ಪಿಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, ‘‘ಗುಂಪಿನಿಂದ ಹಲ್ಲೆ-ಹತ್ಯೆ ಮಾರಣಾಂತಿಕ ಕಾಯಿಲೆಯಾಗಿ ದೇಶಾದ್ಯಂತ ಹರಡುತ್ತಿದೆ. ಇಂತಹ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಳ್ಳುತ್ತಿ ರುವುದು ಕಳವಳದ ವಿಚಾರ’’ ಎಂದಿದ್ದಾರೆ.

‘‘ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಠಿಣ ಕಾನೂನು ಜಾರಿಯ ಅಗತ್ಯ ಇದೆ. ಆದರೆ, ಈ ಬಗ್ಗೆ ಕೇಂದ್ರ ಸರಕಾರದಲ್ಲಿ ಇಚ್ಚಾ ಶಕ್ತಿಯ ಕೊರತೆ ಕಾಣಿಸುತ್ತಿದೆ’’ ಎಂದು ಅವರು ಹೇಳಿದರು.

ಗುಂಪಿನಿಂದ ಹಲ್ಲೆ-ಹತ್ಯೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಶಿಫಾರಸು ಮಾಡುವ ಉತ್ತರಪ್ರದೇಶ ಕಾನೂನು ಆಯೋಗದ ಕರಡು ಮಸೂದೆ ಸಲ್ಲಿಸಿರುವುದನ್ನು ಮಾಯಾವತಿ ಅವರು ಸ್ವಾಗತಿಸಿದ್ದಾರೆ.

ಗೋರಕ್ಷಕ ಸಹಿತ ಗುಂಪಿನಿಂದ ಹಲ್ಲೆ-ಹತ್ಯೆ ಘಟನೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿರುವ ಉತ್ತರಪ್ರದೇಶದ ಕಾನೂನು ಆಯೋಗ, ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಶಿಫಾರಸು ಮಾಡುವ ಕರಡು ಮಸೂದೆಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಗುರುವಾರ ಸಲ್ಲಿಸಿದೆ.

‘‘ಈ ಕಾಯಿಲೆ ಕಾನೂನು ನಿಯಮವನ್ನು ಜಾರಿಗೊಳಿಸಲು ಅವಕಾಶ ನೀಡದ ಸರಕಾರದ ಉದ್ದೇಶ ಹಾಗೂ ನೀತಿಯ ಕೊಡುಗೆ. ಇದರಿಂದ ದಲಿತರು, ಬುಡಕಟ್ಟು ಜನರು ಅಥವಾ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲ, ಸಮಾಜದ ಎಲ್ಲ ವರ್ಗದವರು ಹಾಗೂ ಪೊಲೀಸರು ಕೂಡ ಬಲಿಪಶುಗಳಾಗುತ್ತಿದ್ದಾರೆ’’ ಎಂದು ಮಾಯಾವತಿ ಹೇಳಿದರು. ‘‘ಇಂತಹ ಸಂದರ್ಭ, ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಶಿಫಾರಸು ಮಾಡುವಂತೆ ಉತ್ತರಪ್ರದೇಶದ ಕಾನೂನು ಆಯೋಗ ಕರಡು ಮಸೂದೆ ಮಂಡಿಸಿರುವುದು ಸ್ವಾಗತಾರ್ಹ’’ ಎಂದು ಅವರು ಹೇಳಿದ್ದಾರೆ.

‘‘ಕಠಿಣ ಕಾನೂನು ರೂಪಿಸುವ ಜೊತೆಗೆ ಕಾನೂನು ಜಾರಿಗೊಳಿಸಲು ಬಿಜೆಪಿ ಬಿಎಸ್‌ಪಿಯಂತೆ ಕಠಿಣ ಇಚ್ಚಾ ಶಕ್ತಿ ಬೆಳೆಸಿಕೊಳ್ಳಬೇಕು.ಆಗ ಮಾತ್ರ ಈ ಕಾಯಿಲೆಯನ್ನು ನಿಗ್ರಹಿಸಲು ಸಾಧ್ಯ’’ ಎಂದು ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News