ಯಾನ: ಯವ್ವನದ ಕಡಲಲ್ಲಿ ಒಂದು ಪ್ರಯಾಣ

Update: 2019-07-13 18:31 GMT

ಕಾಲೇಜ್ ಕತೆಗಳು ಎಂದೊಡನೆ ಹೀರೋ ಪ್ರಾಧಾನ್ಯತೆಯುಳ್ಳ ಪ್ರೇಮಕತೆಗಳು ಮಾತ್ರ ನೆನಪಾಗುತ್ತವೆ. ಆದರೆ ನಾಯಕಿಯರನ್ನೇ ಕೇಂದ್ರ ಪಾತ್ರವಾಗಿಸಿ ಸಿದ್ಧವಾಗಿರುವ ಚಿತ್ರ ‘ಯಾನ’. ನಾಯಕಿ ಪ್ರಧಾನ ಎಂದೊಡನೆ ಅಳುಮುಂಜಿ ತ್ಯಾಗದೇವತೆ ಅಥವಾ ಹೊಡಿಬಡಿ ಚಂಡಿ ಚಾಮುಂಡಿ ಪಾತ್ರವೂ ಅಲ್ಲ ಎನ್ನುವುದೇ ಈ ಚಿತ್ರದ ವಿಶೇಷ. ಹಾಗಾಗಿ ಕನ್ನಡದಲ್ಲಿ ಅಪರೂಪ ಎನಿಸಬಹುದಾದ ಸಹಜ ಶೈಲಿಯ ಪಾತ್ರಗಳೊಂದಿಗೆ ಬಂದಿರುವ ಚಿತ್ರ ಎಂಬ ಕಾರಣದಿಂದಲೇ ವಿಭಿನ್ನವಾದ ಚಿತ್ರ ಇದು.

ಮಾಯಾ, ನಂದಿನಿ ಮತ್ತು ಅಂಜಲಿ ಎಂಬ ಮೂವರು ನಾಯಕಿಯರ ಹಿನ್ನೆಲೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ಸಂಗೀತಾಸಕ್ತೆಯಾದ ಮಾಯಾಳ ತಾಯಿ ನೃತ್ಯಗಾತಿಯಾಗಿ ಗುರುತಿಸಿಕೊಂಡಂತಹ ಸುಜಾತ. ವೈದ್ಯ ವೃತ್ತಿಯಲ್ಲಿರುವ ತಂದೆ ಜಯದೇವ್ ಮಗಳಿಗೆ ನಿತ್ಯ ಕೈತುಂಬ ದುಡ್ಡು ನೀಡಿ ಪ್ರೀತಿ ತೋರುತ್ತಾರೆ. ಹುಡುಗರ ಕೈಗಳಿಂದಲೇ ದುಡ್ಡು ಖರ್ಚು ಮಾಡಿಸುವಲ್ಲಿ ಎತ್ತಿದ ಕೈಯಂತಿರುವಾಕೆ ನಂದಿನಿ. ಉಳಿದ ಇಬ್ಬರಿಗೆ ಹೋಲಿಸಿದರೆ ಆಕೆಯೇ ಸ್ವಲ್ಪಗಂಡುಬೀರಿ. ತೀರ್ಥಹಳ್ಳಿಯ ಹುಡುಗಿ ಅಂಜಲಿ ಬೆಂಗಳೂರಿನ ಕಾಲೇಜಿಗೆ ಅಂಜಿಕೊಂಡೇ ಬರುವವಳಾದರೂ ಆಕೆಯ ಕೈಗೆ ಖಾಲಿಯಾಗದ ಕ್ರೆಡಿಟ್ ಕಾರ್ಡ್ ನೀಡಿರುತ್ತಾರೆ ಚಿಕ್ಕಪ್ಪ. ಹೀಗೆ ದುಡ್ಡಿಗೆ, ಓದಿಗೆ ಸಮಸ್ಯೆ ಇರದ ಮೂವರು ಹುಡುಗಿಯರು ಕೂಡ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರಾಗಿರುತ್ತಾರೆ. ಒಂದೇ ಕಾಲೇಜ್‌ನಲ್ಲಿದ್ದರೂ ಪರಸ್ಪರ ಪರಿಚಯವಾಗುವ ಸಂದರ್ಭವನ್ನೇ ಕಂಡಿರುವುದಿಲ್ಲ. ಈ ಮೂವರು ತಮ್ಮ ಬದುಕಲ್ಲಿ ಅವರೇ ಮೈಮೇಲೆ ಎಳೆದುಕೊಳ್ಳುವ ಸಮಸ್ಯೆಗಳು ಅವರನ್ನು ಒಂದೇ ಫ್ರೇಮ್‌ಗೆ ತರುತ್ತವೆ. ಅಲ್ಲಿಗೆ ಚಿತ್ರ ಮಧ್ಯಂತರ ತಲುಪಿರುತ್ತದೆ. ಅವರು ತಂದುಕೊಂಡ ಸಮಸ್ಯೆಗಳೇನು ಮತ್ತು ಅವುಗಳಿಂದ ಹೇಗೆ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವುದರ ಸೊಬಗನ್ನು ಸವಿಯಲು ನೀವು ‘ಯಾನ’ ನೋಡಲು ಸಿದ್ಧರಾಗಬೇಕು.

ಚಿತ್ರದಲ್ಲಿ ನಾಯಕಿಯರಾಗಿ ನಟಿಸಿರುವ ಮೂರು ಮಂದಿ ಯುವತಿಯರಿಗೂ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಸಮಾನ ಅವಕಾಶ ನೀಡಿ ನೈಜ ನಟನೆ ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ. ಆದರೂ ನಟನೆಯ ವಿಚಾರದಲ್ಲಿ ಅಂಜಲಿ ಪಾತ್ರದ ಮೂಲಕ ವೈಸಿರಿ ಹೆಚ್ಚು ಗಮನ ಸೆಳೆದಿದ್ದಾರೆ ಎಂದರೆ ತಪ್ಪಾಗದು. ಅವರ ಜೋಡಿ ಹುಡುಗರ ವಿಚಾರಕ್ಕೆ ಬಂದರೆ ನಂದಿನಿಯ ಪ್ರಿಯಕರ ಯುವರಾಜನ ಪಾತ್ರವಹಿಸಿದ ನಟನ ಅಭಿನಯ ಉಲ್ಲೇಖನೀಯ. ಮಾಯಾಳ ತಂದೆ ತಾಯಿಯಾಗಿ ಅನಂತನಾಗ್ ಮತ್ತು ಸುಹಾಸಿನಿ ಜೋಡಿ ತಮ್ಮ ಲವಲವಿಕೆಯನ್ನು ಇಲ್ಲಿಯೂ ಧಾರೆ ಎರೆದಿದ್ದಾರೆ. ಅಂಜಲಿಯ ತಂದೆಯಾಗಿ ರಾಮಕೃಷ್ಣ, ಚಿಕ್ಕಪ್ಪನಾಗಿ ಸುಂದರ್, ಪ್ರಾಂಶುಪಾಲರಾಗಿ ಸುಂದರ್ ರಾಜ್ ಒಂದೇ ದೃಶ್ಯದಲ್ಲಿ ಬಂದರೂ ನೆನಪಲ್ಲಿ ಉಳಿಯುತ್ತಾರೆ. ಇವಿಷ್ಟು ಪಾತ್ರಗಳಲ್ಲದೇ ಕನ್ನಡದ ಜನಪ್ರಿಯ ಪೋಷಕ ತಾರೆಗಳಿಗೆಲ್ಲ ಒಂದೊಂದು ಪಾತ್ರ ಸೃಷ್ಟಿಸಿ ಅವರ ನಡುವೆ ಪ್ರೇಕ್ಷಕರಿಗೆ ಒಂದು ಪ್ರಯಾಣ ಮಾಡಿಸಲಾಗಿದೆ. ಅಲ್ಲದೆ ಪ್ರತಿಯೊಂದು ಪಾತ್ರಗಳು ಕೂಡ ಕಲಾವಿದರಿಗೆ ಹೊಂದಿಕೊಂಡಂತೆ ಕಾಣಿಸುವುದರಿಂದ ಎಲ್ಲಿಯೂ ಹೆಚ್ಚುವರಿ ಆಗುತ್ತಿದೆ ಎಂಬ ಭಾವ ಮೂಡುವುದಿಲ್ಲ.

ಉದಾಹರಣೆಗೆ ಕಾಲೇಜಿನಲ್ಲಿ ನಂದಿನಿಯ ಹಿಂದೆ ಬೀಳುವ ಚಿಕ್ಕಣ್ಣ, ಪ್ರಯಾಣ ಶುರುವಾದಾಗ ಡ್ರೈವರಣ್ಣನಾಗಿರುವ ಸಾಧು ಕೋಕಿಲ, ರೈತ ಗಡ್ಡಪ್ಪಸೇರಿದಂತೆ ಕ್ಯಾಮಿಯೋ ಎಂಟ್ರಿ ನೀಡುವ ಹುಚ್ಚ ವೆಂಕಟ್, ರಘು ದೀಕ್ಷಿತ್ ಪಾತ್ರಗಳ ತನಕ ಪ್ರತಿಯೊಬ್ಬರು ಕಳೆ ನೀಡುತ್ತಾ ಸಾಗುತ್ತಾರೆ. ಅದರಲ್ಲಿಯೂ ರಂಗಾಯಣ ರಘು ಮತ್ತು ವೀಣಾ ಸುಂದರ್ ಜೋಡಿ ಗಮನ ಸೆಳೆಯುತ್ತಾರೆ. ಅಪರೂಪಕ್ಕೆ ರಘುವಿನ ಪಾತ್ರಕ್ಕೆ ಅಂಡರ್ ಪ್ಲೇ ಮತ್ತು ಅದೇ ವೇಳೆ ವೀಣಾರನ್ನು ಸಿಡುಕುವಂತೆ ಮಾಡಿ ಬ್ಯಾಲೆನ್ಸ್ ಮೂಡಿಸಿದ ನಿರ್ದೇಶಕಿಗೆ ಹ್ಯಾಟ್ಸಾಪ್ ಹೇಳಲೇಬೇಕು. ‘ತಿಥಿ’ ಖ್ಯಾತಿಯ ಪೂಜಾರ ಎರಡು ಡೈಮನ್ಷನ್ ಸೌಂದರ್ಯವನ್ನು ತೋರಿಸಿರುವ ಜಾಣ್ಮೆಯನ್ನು ಸಹ ಮೆಚ್ಚಲೇಬೇಕು. ಗಿಟಾರಿಸ್ಟ್ ಪಾತ್ರದಲ್ಲಿ ಪಿ. ರವಿಶಂಕರ್ ಆಗಮನ ಅಚ್ಚರಿ ನೀಡುತ್ತದೆ. ಬಿ. ಎ. ಮಧು ಮತ್ತು ಸಿಂಪಲ್ ಸುನಿ ಸಂಭಾಷಣೆಗಳು ಸಂದೇಶ ಮತ್ತು ಚುರುಕು ಹಾಸ್ಯಗಳೊಂದಿಗೆ ಗಮನ ಸೆಳೆಯುತ್ತವೆ. ಆದರೆ ಕ್ಯಾಂಪಸ್ ದೃಶ್ಯದ ಕೆಲವು ಮಾತುಗಳು ಹುಡುಗಿಯರು ನಿಜಕ್ಕೂ ಇಂತಹ ಗಾಸಿಪ್ ಮಾತನಾಡುತ್ತಾರೆಯೇ? ಎಂಬ ಸಂದೇಹ ಮೂಡಿಸುತ್ತದೆ.

ಪುರಾಣದ ಉದಾಹರಣೆ ನೀಡಿ ಅದನ್ನು ಇತಿಹಾಸ ಎಂದು ಹೇಳಿರುವುದು ಮತ್ತೊಂದು ವಿಪರ್ಯಾಸ. ಮಧ್ಯಂತರದ ಬಳಿಕದ ಪ್ರಯಾಣ ಬೋರ್ ಹೊಡೆಸದಂತೆ ಮಾಡಿರುವ ಹಿರಿಮೆ ಕರಮ್ ಚಾವ್ಲಾ ಅವರ ಛಾಯಾಗ್ರಹಣಕ್ಕೆ ಸಲ್ಲುತ್ತದೆ. ಹಾಡುಗಳಿಗಿಂತಲೂ ಅನೂಪ್ ಸೀಳಿನ್ ನೀಡಿರುವ ಹಿನ್ನೆಲೆ ಸಂಗೀತ, ಆಲಾಪ ಆಕರ್ಷಕ. ಆದರೆ ನಾಟಕೀಯ ಮುಹೂರ್ತವೊಂದರಲ್ಲಿ ಮೂವರು ನಾಯಕಿಯರು ಸೇರಿ ನಾಟಕದ ವೇದಿಕೆಯಲ್ಲಿ ನೃತ್ಯವಾಡುತ್ತಾರೆ ಎನ್ನುವುದು ಮಾತ್ರ ಜೀರ್ಣಿಸಲು ಕಷ್ಟವಾಗುವ ವಿಚಾರ. ಅಂತಹ ಕೆಲವೇ ಕೆಲ ವಿಚಾರಗಳನ್ನು ಪಕ್ಕಕ್ಕೆ ಇರಿಸಿದರೆ ಚಿತ್ರ ಖಂಡಿತವಾಗಿ ಎಲ್ಲರ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ. ‘ಜಿಂದಗೀ ನ ಮಿಲೇಗಿ ದೊಬಾರ’ದಂತಹ ಚಿತ್ರಗಳು ಕನ್ನಡದಲ್ಲೇಕೆ ಬರುತ್ತಿಲ್ಲ ಎಂದು ಕೊರಗುವವರು ಖಂಡಿತವಾಗಿ ನೋಡಲೇಬೇಕಾದ ಸಿನೆಮಾ ಇದು.

ತಾರಾಗಣ: ವೈಭವಿ, ವೈನಿಧಿ, ವೈಸಿರಿ
ನಿರ್ದೇಶನ: ವಿಜಯಲಕ್ಷ್ಮೀ ಸಿಂಗ್
ನಿರ್ಮಾಣ: ಹರೀಶ್ ಶೇರಿಗಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News