ಶೀಘ್ರದಲ್ಲೇ ರೇಷನ್‌ ಕಾರ್ಡ್ ಪೋರ್ಟೆಬಿಲಿಟಿ ವ್ಯವಸ್ಥೆ : ರಾಮ್‌ ವಿಲಾಸ್ ಪಾಸ್ವಾನ್

Update: 2019-07-13 19:48 GMT

ಹೊಸದಿಲ್ಲಿ, ಜು.13: ಭಾರತೀಯ ಆಹಾರ ನಿಗಮ(ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ)ದ ನಿರ್ವಹಣೆಯಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಉನ್ನತ ತಂತ್ರಜ್ಞಾನದ ಮೆರುಗು ನೀಡಿರುವುದರಿಂದ ಶೀಘ್ರದಲ್ಲೇ ರೇಷನ್ ಕಾರ್ಡ್ ಪೋರ್ಟೆಬಿಲಿಟಿ(ವರ್ಗಾವಣೆ) ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವ ರಾಮವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಇದರಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಉದ್ಯೋಗ ಅರಸಿ ತಮ್ಮ ಹುಟ್ಟೂರು ಅಥವಾ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ರೇಷನ್ ಕಾರ್ಡನ್ನು ಉದ್ಯೋಗ ನಿರ್ವಹಿಸುವ ಪಟ್ಟಣಕ್ಕೆ ವರ್ಗಾಯಿಸಬಹುದಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ. ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ನಿಗದಿತ ಪ್ರಮಾಣದಲ್ಲಿ ಕಡಿಮೆ ವೆಚ್ಚದಲ್ಲಿ ಆಹಾರ ವಸ್ತುಗಳನ್ನು ಪಡೆಯಲು ಸಾಧ್ಯವಾಗಿದೆ. ತಿಂಗಳಿಗೆ ತಲಾ 5 ಕಿ.ಗ್ರಾಂ ಆಹಾರಧಾನ್ಯವನ್ನು ಸಬ್ಸಿಡಿ ದರದಲ್ಲಿ ಕಿ.ಗ್ರಾಂಗೆ 2ರಿಂದ 3 ರೂ. ಪಾವತಿಸಿ ಪಡೆಯಬಹುದಾಗಿದೆ. ಮುಂದಿನ ಸೆಪ್ಟೆಂಬರ್‌ನಿಂದ ಉದ್ಯೋಗಕ್ಕಾಗಿ ಬೃಹತ್ ನಗರಗಳಿಗೆ ವಲಸೆ ಹೋಗುವ ಬಡವರು ತಮ್ಮ ರೇಷನ್‌ಕಾರ್ಡ್ ಬಳಸಿ ತಾವು ಉದ್ಯೋಗ ಮಾಡುವ ನಗರಗಳಲ್ಲೇ ತಮ್ಮ ಪಾಲಿನ ಪಡಿತರ ವಸ್ತುಗಳನ್ನು ಪಡೆಯಬಹುದಾಗಿದೆ.

ಅಲ್ಲದೆ 2020ರ ಜೂನ್ 30ರೊಳಗೆ ರೇಷನ್ ಕಾರ್ಡ್‌ಗಳನ್ನು ಪೂರ್ಣಪ್ರಮಾಣದ ವರ್ಗಾವಣೆ ವ್ಯವಸ್ಥೆಯಡಿ ತರಲಾಗುವುದು. ಇದರಿಂದ ರಾಜ್ಯದ ಯಾವುದೇ ಊರಿನಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಈಗಲೇ ಸೂಚನೆ ನೀಡಲಾಗಿದೆ. ದೇಶದಾದ್ಯಂತ ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ರಾಜ್ಯಗಳೂ ಪಡಿತರ ವಿತರಣೆ ವ್ಯವಸ್ಥೆಯನ್ನು ಪಿಒಎಸ್(ಮಾರಾಟದ ಹಂತದ ವ್ಯವಸಥೆ) ಮೂಲಕವೇ ನಡೆಸಲು ಸೂಚಿಸಲಾಗಿದೆ. ಒಂದು ದೇಶ-ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ . ಇದರಂತೆ ಒಂದೇ ಸರ್ವರ್‌ಗೆ ಎಲ್ಲಾ ರೇಷನ್ ಕಾರ್ಡ್‌ಗಳ ಮಾಹಿತಿ ಒದಗಿಸಲಾಗುವುದು. ಈ ಮೂಲಕ ದೇಶದಾದ್ಯಂತ ಫಲಾನುಭವಿಗಳು ರೇಷನ್ ಕಾರ್ಡ್ ಬಳಸಿ ತಮ್ಮ ಪಾಲಿ ಆಹಾರಧಾನ್ಯ ಪಡೆಯಬಹುದು ಎಂದು ಸಚಿವ ಪಾಸ್ವಾನ್ ಹೇಳಿದ್ದಾರೆ.

 ಡಿಪೋ ಆನ್‌ಲೈನ್ ವ್ಯವಸ್ಥೆ(ಡಿಒಎಸ್)ಯನ್ನು ಪಿಡಿಎಸ್‌ನೊಂದಿಗೆ ಸಂಯೋಜಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಇದರಂತೆ ಭಾರತೀಯ ಆಹಾರ ನಿಗಮವು ಎಲ್ಲಾ ರಾಜ್ಯಗಳಿಗೂ 4 ತಿಂಗಳಾವಧಿಗೆ ಇಂಟರ್‌ನೆಟ್ ಮಾಹಿತಿವ್ಯವಸ್ಥೆ ಒದಗಿಸುತ್ತದೆ. ಆ ಬಳಿಕ ಎರಡು ತಿಂಗಳೊಳಗೆ ರಾಜ್ಯ ಸರಕಾರಗಳು ತಮ್ಮ ಗೋದಾಮಿನ ನಿರ್ವಹಣಾ ವ್ಯವಸ್ಥೆಯನ್ನು ಡಿಒಎಸ್‌ನೊಂದಿಗೆ ಸಂಯೋಜಿಸಬೇಕು ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News