ಹುಷಾರ್... ಆಧಾರ್ ಸಂಖ್ಯೆ ನಮೂದಿಸುವ ಮುನ್ನ ಇದನ್ನು ಓದಲೇಬೇಕು !

Update: 2019-07-14 03:37 GMT

ಹೊಸದಿಲ್ಲಿ: ಕಾರು ಅಥವಾ ಮನೆ ಖರೀದಿ, ವಿದೇಶ ಪ್ರವಾಸ ಅಥವಾ ಹೂಡಿಕೆ ಹೀಗೆ ದೊಡ್ಡ ಮೌಲ್ಯದ ವಹಿವಾಟುಗಳನ್ನು ನಡೆಸುವಾಗ ಪಾನ್ ನಂಬರ್ ಬದಲು ಆಧಾರ್ ಸಂಖ್ಯೆಯನ್ನು ನಮೂದಿಸಲು ಅವಕಾಶ ನೀಡಲಾಗಿದೆ. ಆದರೆ ನೀವು ತಪ್ಪಾಗಿ ಆಧಾರ್ ಸಂಖ್ಯೆಯನ್ನು ನೀಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತಂದು, ಅಧಿಸೂಚನೆ ಹೊರಡಿಸಿದ ಬಳಿಕ ಈ ಹೊಸ ದಂಡನಾ ಕ್ರಮ 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕ ಮೌಲ್ಯದ ವಹಿವಾಟಿನ ವೇಳೆ ನಿಖರವಾದ ಆಧಾರ್ ಸಂಖ್ಯೆಯನ್ನು ನಮೂದಿಸಲು ವಿಫಲವಾಗುವ ವ್ಯಕ್ತಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಹಾಗೂ ಈ ಗುರುತಿನ ಸಂಖ್ಯೆಯನ್ನು ದೃಢೀಕರಿಸಬೇಕಾದ ವ್ಯಕ್ತಿಗೂ ಇಷ್ಟೇ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ದಂಡ ವಿಧಿಸುವ ಆದೇಶಕ್ಕೆ ಮುನ್ನ ವ್ಯಕ್ತಿಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ.

ಪಾನ್ ಹಾಗೂ ಆಧಾರ್ ಸಂಖ್ಯೆಯನ್ನು ಪರ್ಯಾಯವಾಗಿ ಬಳಸುವ ಸಂಬಂಧ ಜು. 5ರಂದು ಮಾಡಿದ ಬಜೆಟ್ ಘೋಷಣೆಗೆ ಅನುಸಾರವಾಗಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ.

120 ಕೋಟಿ ಭಾರತೀಯರು ಇದೀಗ ಆಧಾರ್ ಸಂಖ್ಯೆ ಹೊಂದಿದ್ದಾರೆ. ಆದರೆ ಪಾನ್ ಸಂಖ್ಯೆ ಹೊಂದಿರುವವರು 22 ಕೋಟಿ ಮಾತ್ರ ಎನ್ನುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದರು. ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News