ಆದಿವಾಸಿಗಳ ಮೇಲೆ ಪೆಲೆಟ್ ಗುಂಡು ಹಾರಾಟ: ತನಿಖೆಗೆ ಕಮಲ್ ನಾಥ್ ಆದೇಶ
ಭೋಪಾಲ,ಜು.14: ಬುರಹಾನಪುರ ಜಿಲ್ಲೆಯ ನೇಪಾನಗರದ ಬದ್ನಾಪುರ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಆದಿವಾಸಿಗಳ ಮೇಲೆ ಪೆಲೆಟ್ ಗುಂಡುಗಳನ್ನು ಹಾರಿಸಿದ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಶನಿವಾರ ಪ್ರಕಟಿಸಿದ್ದಾರೆ.
ಜು.9ರಂದು ನಡೆದಿದ್ದ ಈ ಘಟನೆಯಲ್ಲಿ ನಾಲ್ವರು ಆದಿವಾಸಿಗಳು ಗಾಯಗೊಂಡಿದ್ದಾರೆ. ಆದಿವಾಸಿಗಳು ತಮ್ಮತ್ತ ಕಲ್ಲುತೂರಾಟ ನಡೆಸಿದ್ದರೆಂದು ಅರಣ್ಯಾಧಿಕಾರಿಗಳು ಆರೋಪಿಸಿದ್ದಾರೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಅಭಿಯಾನ ಹಿಂಸಾಚಾರಕ್ಕೆ ಕಾರಣವಾಗಿದ್ದು,ತಮ್ಮನ್ನು ಒಕ್ಕಲೆಬ್ಬಿಸುವುದು ಅಕ್ರಮ ಎಂದು ಆದಿವಾಸಿಗಳು ಪ್ರತಿಪಾದಿಸಿದ್ದಾರೆ.
ಅರಣ್ಯ ಹಕ್ಕುಗಳ ಕಾಯ್ದೆಯಡಿ ಸಾಂಪ್ರದಾಯಿಕವಾಗಿ ತಾವು ವಾಸವಿರುವ ಭೂಮಿಯ ಮೇಲೆ ಹಕ್ಕುಗಳಿಗಾಗಿ ಆದಿವಾಸಿಗಳ ಕೋರಿಕೆಯು ತಿರಸ್ಕೃತಗೊಂಡ ಬಳಿಕ ಈ ವರ್ಷದ ಫೆ.13ರಂದು ಸರ್ವೋಚ್ಚ ನ್ಯಾಯಾಲಯವು ಅರಣ್ಯಗಳಲ್ಲಿ ವಾಸವಿರುವ 10 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ತಿರಸ್ಕಾರ ಆದೇಶಗಳನ್ನು ಹೊರಡಿಸುವಲ್ಲಿ ರಾಜ್ಯ ಸರಕಾರಗಳು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿರುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಕೇಂದ್ರವು ಅಫಿಡ್‌ವಿಟ್‌ನ್ನು ಸಲ್ಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಫೆ.28ರಂದು ತನ್ನ ಆದೇಶವನ್ನು ತಡೆಹಿಡಿದಿತ್ತು.
ಮಧ್ಯಪ್ರದೇಶ ಸರಕಾರವು ಮೇ 1ರಂದು ಹಕ್ಕು ಕೋರಿಕೆಗಳು ತಿರಸ್ಕೃತಗೊಂಡಿದ್ದ ಹಲವಾರು ಆದಿವಾಸಿಗಳ ಪ್ರಕರಣಗಳ ಪುನರ್‌ಪರಿಶೀಲನೆ ಕಾರ್ಯವನ್ನು ಆರಂಭಿಸಿದ್ದು,ಇದು ಪೂರ್ಣಗೊಳ್ಳುವವರೆಗೆ ಯಾವುದೇ ತೆರವು ಕಾರ್ಯಾಚರಣೆ ನಡೆಸದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿತ್ತು. ಆದಾಗ್ಯೂ ಜು.9ರಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸುಮಾರು 50 ಅಧಿಕಾರಿಳು ಮತ್ತು ಪೊಲಿಸರು ಬುಲ್ಡೋಝರ್‌ಗಳೊಂದಿಗೆ ನೇಪಾನಗರದ ಸಿವಾಲ್ ಗ್ರಾಮಕ್ಕೆ ತೆರಳಿ ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದರು.
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪಕ್ಷದ ಶಾಸಕ ಹಿರಾಲಾಲ ಅಲವಾ ಅವರು ಕಮಲನಾಥ ಅವರಿಗೆ ಪತ್ರ ಬರೆದ ನಂತರ ಹಿರಿಯ ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಅವರು ಶುಕ್ರವಾರ ಈ ವಿಷಯವನ್ನೆತ್ತಿ ಟ್ವೀಟಿಸಿದ್ದರು. ಘಟನೆಯು ಸರಕಾರದ ಘೋಷಿತ ನೀತಿಯ ವಿರುದ್ಧವಾಗಿದೆ ಎಂದು ಅವರು ಬೆಟ್ಟು ಮಾಡಿದ್ದರು.