ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್

Update: 2019-07-14 16:24 GMT

ಹೊಸದಿಲ್ಲಿ, ಜು.14: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬಿಎಲ್ ಸಂತೋಷ್‌ರನ್ನು ನೇಮಕ ಮಾಡಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.

 ಸಂತೋಷ್ ಪಕ್ಷದ ಜಂಟಿ ಕಾರ್ಯದರ್ಶಿ(ಸಂಘಟನೆ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಮಲಾಲ್ ಆರೆಸ್ಸೆಸ್‌ಗೆ ಮರಳುವ ಇಚ್ಛೆ ವ್ಯಕ್ತಪಡಿಸಿ, ತನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಅಮಿತ್ ಶಾಗೆ ಪತ್ರ ಬರೆದಿದ್ದರು. ಸಂತೋಷ್ ತಕ್ಷಣದಿಂದಲೇ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸುತ್ತಾರೆ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕ ಮೂಲದವರಾದ ಸಂತೋಷ್ 2006ರಿಂದ 2014ರವರೆಗೆ ಕರ್ನಾಟಕದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಧಾನಿ ಮೋದಿ ಹಾಗೂ ಪಕ್ಷಾಧ್ಯಕ್ಷ ಅಮಿತ್ ಶಾ ಇಬ್ಬರಿಗೂ ನಿಕಟವಾಗಿರುವ ಸಂತೋಷ್ ಅವರ ಅಭಿಪ್ರಾಯವನ್ನು ಆಧರಿಸಿ ದಕ್ಷಿಣ ರಾಜ್ಯಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳುತ್ತಿತ್ತು. 2014ರಲ್ಲಿ ಸಂತೋಷ್‌ರನ್ನು ಜಂಟಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.

ಬಿಜೆಪಿಯ ಸಾಂಸ್ಥಿಕ ಚುನಾವಣೆ ಮುಂದಿನ ತಿಂಗಳು ನಡೆಯಲಿದ್ದು ಕೇಂದ್ರ ಸಚಿವ ಸಂಪುಟದ ಸದಸ್ಯರಾಗಿರುವ ಅಮಿತ್ ಶಾ ಪಕ್ಷಾಧ್ಯಕ್ಷತೆ ತ್ಯಜಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆಗಾರಿಕೆ ಸಂತೋಷ್ ಹೆಗಲಮೇಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News