8 ದಿನ ಅಕ್ರಮ ವಶದಲ್ಲಿರಿಸಿ ದಲಿತ ಮಹಿಳೆಯ ಅತ್ಯಾಚಾರಗೈದ ಪೊಲೀಸರು: ಆರೋಪ

Update: 2019-07-14 16:39 GMT

ಜೈಪುರ, ಜು. 14: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜಸ್ಥಾನದ ಚುರು ಜಿಲ್ಲೆಯ 35ರ ಹರೆಯದ ದಲಿತ ಮಹಿಳೆಯನ್ನು 8 ದಿನಗಳ ಕಾಲ ಅಕ್ರಮ ವಶದಲ್ಲಿ ಇರಿಸಲಾಗಿತ್ತು ಹಾಗೂ ಆಕೆಯ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮಹಿಳೆಯ ಮೈದುನನ್ನು ಜುಲೈ 5ರಂದು ಬಂಧಿಸಲಾಗಿತ್ತು. ಅದೇ ದಿನ ಆತ ಪೊಲೀಸ್ ಕಸ್ಟಡಿಯಲ್ಲಿ ಸಾವ್ನನ್ನಪ್ಪಿದ್ದಾನೆ. ಈ ಬಗ್ಗೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ‘‘ಜೂನ್ 30ರಂದು ಪೊಲೀಸರು ನನ್ನ ತಮ್ಮನನ್ನು ಕಳವು ಆರೋಪದಲ್ಲಿ ಕರೆದೊಯ್ದರು. ಜುಲೈ 3ರಂದು ನನ್ನ ಪತ್ನಿಯನ್ನು ಕೂಡ ಕರೆದೊಯ್ದರು. ಜುಲೈ 6-7ರ ರಾತ್ರಿ ಪೊಲೀಸರು ನನ್ನ ತಮ್ಮನಿಗೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಅದಕ್ಕೆ ಸಾಕ್ಷಿಯಾದ ನನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪತ್ನಿಯ ಉಗುರು ಕಿತ್ತಿದ್ದಾರೆ. ಕಣ್ಣುಗಳಿಗೆ ಘಾಸಿ ಉಂಟು ಮಾಡಿದ್ದಾರೆ” ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.

 “ಸಹೋದರನ ಸಾವಿನ ಬಳಿಕವೂ ನನ್ನ ಪತ್ನಿಯನ್ನು ಪೊಲೀಸರು ಜುಲೈ 10ರ ವರೆಗೆ ಕಸ್ಟಡಿಯಲ್ಲಿ ಇರಿಸಿದ್ದರು” ಎಂದು ಅವರು ಆಪಾದಿಸಿದ್ದಾರೆ. ಮಹಿಳೆಯ ಕುಟುಂಬದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಶುಕ್ರವಾರ ತಡ ರಾತ್ರಿ ಚುರು ಎಸ್‌ಪಿ ರಾಜೇಂದ್ರ ಕುಮಾರ್ ಶರ್ಮಾ ವಜಾಗೊಳಿಸಿ ಆದೇಶ ನೀಡಿದೆ.

ಅದಕ್ಕಿಂತ ಮೊದಲು ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹಾಗೂ ಓರ್ವ ಹೆಡ್ ಕಾನ್ಸ್‌ಟೆಬಲ್, 6 ಕಾನ್ಸ್‌ಟೆಬಲ್‌ಗಳನ್ನು ಪೊಲೀಸ್ ಅಧೀಕ್ಷಕರು ಅಮಾನತುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News