‘ಚೋರ್’ ಘೋಷಣೆಯ ಬಗ್ಗೆ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-07-14 16:46 GMT

ಹೊಸದಿಲ್ಲಿ, ಜು.14: “ಚೋರ್ ಚೋರ್ ಎಂದು ನನ್ನನ್ನು ನಿಂದಿಸುವ ಮೊದಲು ನಿಮ್ಮ ಬ್ಯಾಂಕ್‌ಗಳನ್ನು ಕೇಳಿನೋಡಿ. ನನ್ನಿಂದ ಬರಬೇಕಿರುವ ಸಾಲವನ್ನು ಪಾವತಿಸುತ್ತೇನೆ ಎಂದು ಕಳೆದ ಒಂದು ವರ್ಷದಿಂದ ನಿರಂತರ ಮನವಿ ಮಾಡಿಕೊಳ್ಳುತ್ತಿದ್ದರೂ ಬ್ಯಾಂಕ್‌ಗಳು ಒಪ್ಪುತ್ತಿಲ್ಲ. ಹಾಗಿದ್ದರೆ ಯಾರು ಕಳ್ಳರು, ನೀವೇ ನಿರ್ಧರಿಸಿ” ಎಂದು ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

ವಿಜಯ್ ಮಲ್ಯರೊಂದಿಗೆ ಇರುವ ಫೋಟೋವನ್ನು ವೆಸ್ಟಿಂಡೀಸ್‌ನ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ಬಿಗ್‌ಬಾಸ್‌ನೊಂದಿಗೆ ಎಂದು ಬರೆದಿದ್ದರು. ಐಪಿಎಲ್ ಕ್ರಿಕೆಟ್‌ನಲ್ಲಿ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದರೆ, ವಿಜಯ್ ಮಲ್ಯ ತಂಡದ ಮಾಲಕನಾಗಿದ್ದಾರೆ.

 ಗೇಲ್ ಅವರು ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿನೋದಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕ್ರಿಸ್ ಗೇಲ್ ಕೂಡಾ ಮಲ್ಯರನ್ನು ಹುಡುಕುತ್ತಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ವಿಜಯ್ ಮಲ್ಯ ತುಂಬಾ ದೇಶಭಕ್ತರು, ಅವರು ಭಾರತೀಯರಿಂದ ಮಾತ್ರ ಕದಿಯುತ್ತಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಟ್ರೋಲ್‌ಗಳಿಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಉತ್ತರಿಸಿರುವ ಮಲ್ಯ, “ಯೂನಿವರ್ಸ್ ಬಾಸ್ ಮತ್ತು ನನ್ನ ಆತ್ಮೀಯ ಮಿತ್ರನೊಂದಿಗೆ ಸಿಕ್ಕಿಬಿದ್ದಿರುವ ಕ್ಷಣ ಅದ್ಭುತವಾಗಿದೆ. ನನ್ನನ್ನು ಕಳ್ಳ ಎಂದು ಕರೆಯುತ್ತಿರುವ ಎಲ್ಲಾ ಅಸಂಬದ್ಧ ವ್ಯಕ್ತಿಗಳಿಗೆ ಹೇಳುವುದೇನೆಂದರೆ, ನಾನು ಮರುಪಾವತಿಸಲು ಸಿದ್ಧವಿರುವ ಪೂರ್ಣ ಸಾಲವನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂದು ಮೊದಲು ನಿಮ್ಮ ಬ್ಯಾಂಕ್‌ಗಳನ್ನು ಕೇಳಿನೋಡಿ” ಎಂದು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News