ಸ್ವಾತಂತ್ರ್ಯಾ ನಂತರ ಇಂತಹ ಸಂಕಷ್ಟದ ಕಾಲವನ್ನು ಮುಸ್ಲಿಮರು ಎಂದೂ ಎದುರಿಸಿಲ್ಲ: ಹರ್ಷ ಮಂದರ್

Update: 2019-07-14 16:56 GMT

ಹೊಸದಿಲ್ಲಿ, ಜು. 14: ಸ್ವಾತಂತ್ರ್ಯ ದೊರೆತ ಬಳಿಕ ಭಾರತೀಯ ಮುಸ್ಲಿಮರು ಇಂತಹ ಸಂಕಷ್ಟದ ಕಾಲವನ್ನು ಎಂದೂ ಎದುರಿಸಿಲ್ಲ ಎಂಬುದು ನನ್ನ ಭಾವನೆ. ಇದು ಭಾರತೀಯ ಮುಸ್ಲಿಮರಿಗೆ ಮಾತ್ರವಲ್ಲ, ಭಾರತದ ಜಾತ್ಯತೀತತೆಯ ಬಗ್ಗೆ ನಂಬಿಕೆ ಇರಿಸಿದ ಎಲ್ಲರಿಗೂ ಬಿಕ್ಕಟ್ಟಿನ ಸಮಯ ಎಂದು ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಹೇಳಿದ್ದಾರೆ.

 ‘‘ಈ ಸಮಸ್ಯೆ ಕುರಿತು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಕೂಡ ಧ್ವನಿ ಎತ್ತಿಲ್ಲ. 2014ರಲ್ಲಿ ಜನರು ಭರವಸೆಗೆ ಮತ ಹಾಕಿದ್ದರು. ಆದರೆ, ಈ ಭಾರಿ ಪೂರ್ಣ ಪ್ರಕ್ರಿಯೆಯೇ ದ್ವೇಷದಿಂದ ಕೂಡಿತ್ತು’’ ಎಂದು ಅವರು ಹೇಳಿದರು. “ಕಾರವನ್-ಎ-ಮೊಹಬ್ಬತ್‌ನ ಒಂದು ಭಾಗವಾಗಿ ನಾನು ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಗುಂಪು ಥಳಿತಕ್ಕೊಳಗಾದ ಪ್ರತಿ ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ನಾನು ಅವರಲ್ಲಿ ತುಂಬಾ ದುಃಖ, ಪ್ರತ್ಯೇಕತೆಯ ಭಾವ ಹಾಗೂ ಭೀತಿ ನೋಡಿದೆ. ನಮ್ಮ ಸಮಾಜ ಆಳದಿಂದ ಧ್ರುವೀಕರಣಗೊಳ್ಳುತ್ತಿದೆ ಎಂಬುದು ನನ್ನ ಭಾವನೆ ಎಂದು” ಅವರು ತಿಳಿಸಿದರು.

 ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ‘ವಿಸಿಬಲ್ ಮುಸ್ಲಿಂ-ಇನ್‌ವಿಸಿಬಲ್ ಸಿಟಿಝನ್: ಅಂಡರ್‌ಸ್ಟಾಂಡ್ ಇಸ್ಲಾಂ ಇನ್ ಇಂಡಿಯನ್ ಡೆಮಾಕ್ರೆಸಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮುಸ್ಲಿಮರ ಮೇಲಿನ ಗುಂಪಿನ ಥಳಿತದ ತೀವ್ರ ಕ್ರೂರತೆಯ ಕಡೆಗೆ ಬೆಟ್ಟು ಮಾಡಿದ ಮಂದರ್, ‘‘ಕಣ್ಣುಗಳನ್ನು ಹೊರಗೆ ತೆಗೆಯಲಾಗುತ್ತಿದೆ, ದೇಹವನ್ನು ಛಿದ್ರಗೊಳಿಸಲಾಗುತ್ತಿದೆ. ಇದು ಗುಂಪು ಹತ್ಯೆಗಳ ರೀತಿ. ಇಂತಹ ಹತ್ಯೆಗಳು ವ್ಯಕ್ತಿಯನ್ನು ಜೀವನ ಪೂರ್ತಿ ಜೈಲು ಕಂಬಿಗಳ ಹಿಂದೆ ನಿಲ್ಲಿಸುತ್ತದೆ. ಆದರೆ, ಈಗ ಗುಂಪಿನಿಂದ ಹಲ್ಲೆ-ಹತ್ಯೆ ವೌಲ್ಯಯುತವಾಗಿದೆ. ಹತ್ಯೆಗೈದವರು ಹೀರೋಗಳಾಗುತ್ತಾರೆ.’’ ಎಂದರು.

 ಕಾಂಗ್ರೆಸ್ ಸರಕಾರವಿರುವ ರಾಜಸ್ಥಾನದಲ್ಲಿ ಕೂಡ ಪೊಲೀಸರ ಪಾತ್ರ ಪ್ರಶ್ನಾರ್ಹ. ಸಂತ್ರಸ್ತರನ್ನು ಆರೋಪಿಗಳಂತೆ ಪರಿಗಣಿಸಲಾಗುತ್ತಿದೆ. ಗುಂಪು ಹಲ್ಲೆ ನಡೆದ ಸ್ಥಳಕ್ಕೆ ಕಾಂಗ್ರೆಸ್‌ನ ಒಬ್ಬನೇ ಒಬ್ಬ ರಾಜಕಾರಣಿ ಭೇಟಿ ನೀಡಿ ಕಾಳಜಿ ವ್ಯಕ್ತಪಡಿಸಿರುವುದನ್ನು ನಾನು ನೋಡಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಕೂಡ ಸಂತ್ರಸ್ತರ ಬಗ್ಗೆ ಕಾಳಜಿ ತೋರಿಸಿಲ್ಲ ಎಂದು ಮಂದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News