ಪೊಲೀಸ್ ಠಾಣೆಗೆ ಗುಂಪು ದಾಳಿ: ಐವರು ಪೊಲೀಸರಿಗೆ ಗಾಯ

Update: 2019-07-14 17:30 GMT

ಕೋರಾಪತ್,ಜು.14: ಒಡಿಶಾದ ರಾಯಗಡ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಮೇಲೆ ಗುಂಪು ದಾಳಿಯಲ್ಲಿ ಓರ್ವ ಮಹಿಳಾ ಕಾನ್ ಸ್ಟೇಬಲ್ ಸೇರಿದಂತೆ ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು,ಪೊಲೀಸ್ ವಾಹನವೊಂದು ಹಾನಿಗೀಡಾಗಿದೆ.

  ಶುಕ್ರವಾರ ರಾತ್ರಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಇತ್ತೀಚಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ರಾಯಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕದ್ರಕ ಅಪ್ಪಾಳಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿ ರಾಯಗಡ ಶಾಸಕ ಮಕರಂದ ಮುದುಲಿ ಅವರ ಬೆಂಬಲಿಗರು ಶನಿವಾರ ಸಂಜೆ ರಾಯಗಡ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸುತ್ತಿದ್ದರು.

ಇದೇ ವೇಳೆ ಕದ್ರಕ್ ಅವರನ್ನು ಕರೆತಂದಿದ್ದ ಪೊಲೀಸ್ ವಾಹನವು ಠಾಣೆಯನ್ನು ತಲುಪಿತ್ತು. ವಾಹನ ಮತ್ತು ಪೊಲೀಸರತ್ತ ಕಲ್ಲುಗಳ ಮತ್ತು ಬಾಟ್ಲಿಗಳ ತೂರಾಟ ನಡೆಸಿದ ಪ್ರತಿಭಟನಾಕಾರರು ಕದ್ರಕ್ ಅವರನ್ನು ಎಳೆದೊಯ್ಯಲು ಪ್ರಯತ್ನಿಸಿದ್ದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದ್ದರು. ಕಲ್ಲು ತೂರಾಟದಿಂದ ಮಹಿಳಾ ಕಾನ್‌ ಸ್ಟೇಬಲ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದಾರೆ.

ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಸಾಕಷ್ಟು ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಡಿಐಜಿ ಹಿಮಾಂಶು ಲಾಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುದುಲಿ ನಾಮಪತ್ರ ಸಲ್ಲಿಕೆ ವೇಲೆ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆಂದು ಆರ್.ಹರೀಶ ಪಟ್ನಾಯಕ್ ಎನ್ನವವರು ಒಡಿಶಾ ಉಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಶುಕ್ರವಾರ ಸಂಜೆ ಮುದುಲಿ ಬೆಂಬಲಿಗರು ಪಟ್ನಾಯಕ್ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪಟ್ನಾಯಕ್ ಪೊಲೀಸ್ ದೂರು ಸಲ್ಲಿಸಿದ್ದರು.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕದ್ರಕರ ಬೆಂಬಲಿಗರು ಪಟ್ನಾಯಕ್ ಮೇಲೆ ಹಲ್ಲೆ ನಡೆಸಿದ್ದವರ ಮೇಲೆ ದಾಳಿ ನಡೆಸಿದ್ದು,ಇದು ಗುಂಪು ಘರ್ಷಣೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News