ಕಾನೂನು ಆಯೋಗ ಪುನರ್‌ರಚನೆ ಬಗ್ಗೆ ಶೀಘ್ರವೇ ಕೇಂದ್ರ ಸಂಪುಟದ ನಿರ್ಧಾರ

Update: 2019-07-14 18:15 GMT

ಹೊಸದಿಲ್ಲಿ,ಜು.14: ಸಂಕೀರ್ಣ ಕಾನೂನು ವಿಷಯಗಳಲ್ಲಿ ಸರಕಾರಕ್ಕೆ ಸಲಹೆ ನೀಡುವ ಕಾನೂನು ಆಯೋಗದ ಅಧಿಕಾರಾವಧಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ಅಂತ್ಯಗೊಂಡಿದ್ದು, ದೇಶದಲ್ಲೀಗ ಕಾನೂನು ಆಯೋಗವೇ ಇಲ್ಲ. ತನ್ಮಧ್ಯೆ ಕಾನೂನು ಸಚಿವಾಲಯವು ನೂತನ ಆಯೋಗ ರಚನೆಯ ಪ್ರಕ್ರಿಯೆಯನ್ನು ಆರಂಭಿಸಿದ್ದು,ಸಂಪುಟವು ಈ ಬಗ್ಗೆ ಶೀಘ್ರವೇ ನಿರ್ಧಾರವನ್ನು ಕೈಗೊಳ್ಳಲಿದೆ ಎನ್ನಲಾಗಿದೆ.

21ನೇ ಕಾನೂನು ಆಯೋಗದ ಮೂರು ವರ್ಷಗಳ ಅಧಿಕಾರಾವಧಿ ಕಳೆದ ವರ್ಷದ ಆ.31ರಂದು ಪೂರ್ಣಗೊಂಡಿದೆ. ಆಯೋಗದ ಪುನರ್‌ರಚನೆಗಾಗಿ ಸಚಿವಾಲಯವು ಕನಿಷ್ಠ ಒಮ್ಮೆ ಪ್ರಸ್ತಾಪ ಸಲ್ಲಿಸಿತ್ತಾದರೂ ಅದು ಮುಂದಕ್ಕೆ ಸಾಗಿರಲಿಲ್ಲ ಮತ್ತು ಬಳಿಕ ಸರಕಾರವು ಚುನಾವಣೆಯಲ್ಲಿ ವ್ಯಸ್ತಗೊಂಡಿತ್ತು.

ಮುಂದಿನ ಕೆಲವೇ ದಿನಗಳಲ್ಲಿ ಆಯೋಗ ಪುನರ್ ರಚನೆಗೆ ಪ್ರಸ್ತಾಪವನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಲಾಗುವುದು ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿದವು.

ನಿವೃತ್ತ ನ್ಯಾ.ಬಿ.ಎಸ್.ಚೌಹಾಣ್ ನೇತೃತ್ವದ 21ನೇ ಕಾನೂನು ಆಯೋಗವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ಹಾಗೂ ಏಕರೂಪ ನಾಗರಿಕ ಸಂಹಿತೆಯಂತಹ ಪ್ರಮುಖ ವಿಷಯಗಳಲ್ಲಿ ತನ್ನ ವರದಿಗನ್ನು ಸರಕಾರಕ್ಕೆ ಸಲ್ಲಿಸಿತ್ತು. ಏಕಕಾಲದಲ್ಲಿ ಚುನಾವಣೆಗಳನ್ನು ಅದು ಬೆಂಬಲಿಸಿತ್ತಾದರೂ ಏಕರೂಪ ನಾಗರಿಕ ಸಂಹಿತೆಗೆ ಕಾಲವಿನ್ನೂ ಪಕ್ವವಾಗಿಲ್ಲ ಎಂದು ತಿಳಿಸಿತ್ತು.

ಕಾನೂನು ಆಯೋಗವು ಸಾಮಾನ್ಯವಾಗಿ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಥವಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರ ನೇತೃತ್ವವನ್ನು ಹೊಂದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News